ಬೆಂಗಳೂರು: ಕಾರು ಹರಿದು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರ ಮಗ ಸಾವನ್ನಪ್ಪಿರುವ ಘಟನೆ ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್ ಬಳಿ ಭಾನುವಾರ ಸಂಜೆ ನಡೆದಿದೆ.
ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಒಂಬತ್ತನೇ ಬೆಟಾಲಿಯನ್‌ನಲ್ಲಿ ಚಾಲಕರಾಗಿರುವ ಹೆಡ್ ಕಾನ್‌ಸ್ಟೇಬಲ್ ಲಿಂಗರಾಜು ಎಂಬುವರ ಪುತ್ರ ಮೋಹಿತ್ (23) ಮೃತಪಟ್ಟವರು.
ಮಡಿವಾಳದ ಕೆಎಸ್‌ಆರ್‌ಪಿ ವಸತಿ ಸಮುಚ್ಚಯದಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದ ಅವರು ರಿಯಲ್ ಎಸ್ಟೇಟ್ ಕಂಪೆನಿಯೊಂದರ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹಿತ್ ಸಹೋದ್ಯೋಗಿ ಸೌರಭ್ ಜತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಸುವೊಂದು ಅವರ ವಾಹನಕ್ಕೆ ಅಡ್ಡ ಬಂದಿತು. ಮೋಹಿತ್, ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ವಾಹನ ಅಡ್ಡಾದಿಡ್ಡಿ ಚಲಿಸಿ ಅವರಿಬ್ಬರೂ ಕೆಳಗೆ ಬಿದ್ದರು. ಇದೇ ವೇಳೆಗೆ ಹಿಂದಿನಿಂದ ಬಂದ ಕಾರು ಅವರ ಮೇಲೆ ಹರಿಯಿತು.
ತೀವ್ರವಾಗಿ ಗಾಯಗೊಂಡ ಮೋಹಿತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಹಿಂಬದಿ ಸವಾರ ಸೌರಭ್ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.