ADVERTISEMENT

ಅಪರೂಪದ ಹೃದಯ ಸಮಸ್ಯೆ: ಯಶಸ್ವಿಯಾದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:33 IST
Last Updated 26 ಫೆಬ್ರುವರಿ 2018, 19:33 IST

ಬೆಂಗಳೂರು: ಡೆಕ್ಸಟ್ರೋಕಾರ್ಡಿಯಾ ಎಂಬ ವಿರಳ ಸಮಸ್ಯೆಯಿಂದ‌‌‌ ಬಳಲುತ್ತಿದ್ದ ತಮಿಳುನಾಡಿನ ಬಸ್‌ ಕಂಡಕ್ಟರ್‌ ತುಳುಕ್ಕನಂ ಅವರಿಗೆ ನಾರಾಯಣ ಹೆಲ್ತ್ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಇವರಿಗೆ ದೇಹದ ಬಲಭಾಗದಲ್ಲಿ ಹೃದಯ ಇತ್ತು. ಸಹಜ ಜೀವನ ನಡೆಸುತ್ತಿದ್ದರೂ, ಇತ್ತೀಚಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ರಕ್ತ ಪೂರೈಸುವ ನಾಳ ನೇರವಾಗಿದ್ದು, ರಕ್ತ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದನ್ನು ಮಿಟ್ರಲ್ ಸ್ಟೆನೊಸಿಸ್ ಡೆಕ್ಸ್‌ಟ್ರೊಕಾರ್ಡಿಯಾ ಎಂದು ಕರೆಯಲಾಗುತ್ತದೆ.
ಇದರಿಂದ ರಕ್ತ ಹೆಪ್ಪುಗಟ್ಟುವ ಹಾಗೂ ಹೃದಯದ ವೈಫಲ್ಯ ಆಗುವ ಸಾಧ್ಯತೆಯೂ ಇತ್ತು ಎಂದು ಹೃದ್ರೋಗ ತಜ್ಞ ಡಾ.ಉದಯ್‌ ಖಾನೋಲ್ಕರ್ ತಿಳಿಸಿದರು.

‘ಪರ್ಕ್ಯುಟೇನಿಯಸ್‌ ಬಲೂನ್ ಮಿಟ್ರಲ್‌ ವಾಲ್ವುಲೊಪ್ಲಾಸ್ಟಿ ಎಂಬ ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. 2 ಲಕ್ಷದಲ್ಲಿ ಒಬ್ಬರಿಗೆ ಈ ತೊಂದರೆ
ಕಾಣಿಸಿಕೊಳ್ಳುತ್ತದೆ. ಎಡಭಾಗದಲ್ಲಿ ಹೃದಯ ಇದ್ದು, ನಾಳ ನೇರವಾಗಿರುವ ಸಮಸ್ಯೆ ಇರುವವರಿಗೆ ಅದನ್ನು ಬದಲಾವಣೆ ಮಾಡುತ್ತಿದ್ದೆವು. ಬಲಭಾಗದಲ್ಲಿ ಹೃದಯ ಇರುವುದು ನಮಗೆ ಸವಾಲಾಗಿತ್ತು. ಈ ಬಾರಿ ನಾವು ಇಂಟ್ರಾ ಕಾರ್ಡಿಯಾಕ್‌ ಎಕೊ ಕಾರ್ಡಿಯೋಗ್ರಫಿ ಗೈಡೆನ್ಸ್‌ ಮೂಲಕ ಚಿಕಿತ್ಸೆ ನೀಡಿದೆವು’ ಎಂದು ವಿವರಿಸಿದರು.

ADVERTISEMENT

‘ನಾನು ಮತ್ತೆ ಮೊದಲಿನಂತೆ ಗುಣಮುಖನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಸಹಜವಾದ ಜೀವನಕ್ಕೆ ಮರಳಿರುವುದು ಖುಷಿ ತಂದಿದೆ’ ಎಂದು ತುಳುಕ್ಕನಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.