ADVERTISEMENT

ಅಪಹರಣ ಬೆದರಿಕೆ: ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಹೊಸಕೋಟೆ: ಹಣಕ್ಕಾಗಿ ಪಟ್ಟಣದ ಬೀಡಿ ಉದ್ಯಮಿ ಒಬ್ಬರ ಮಗನನ್ನು ಅಪಹರಿಸಿ ಒತ್ತೆಯಾಗಿಟ್ಟುಕೊಂಡು ಕೊಲೆ ಮಾಡುವುದಾಗಿ ಬೆದರಿಸಿದ ನಾಲ್ವರು ಆರೋಪಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಒಂದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆಂಧ್ರಪ್ರದೇಶದ ಪಲಮನೇರಿನ ಗಂಗಯ್ಯ (37), ರಾಜೇಂದ್ರರೆಡ್ಡಿ (20), ಸುಬ್ರಮಣಿ (30) ಮತ್ತು ಹೊಸಕೋಟೆ ಕೋಟೆ ಬಡಾವಣೆಯ ಯಶೋಧರ (25) ಶಿಕ್ಷೆಗೆ ಒಳಗಾದವರು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗು ತಲಾ ಹತ್ತು ಸಾವಿರ ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಎರಡು ವರ್ಷ ಕಠಿಣ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರಾದ ಪಿ.ವಿ.ಸಿಂಗ್ರಿ ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಮುಖ್ಯ ಆರೋಪಿ ಗಂಗಯ್ಯ ಬೀಡಿ ಉದ್ಯಮಿ ಅಬ್ದುಲ್‌ಖಾದರ್ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಮನೆಯ ಆಗು-ಹೋಗುಗಳನ್ನು ತಿಳಿದಿದ್ದ. ಗಂಗಯ್ಯ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ 2011ರ ಫೆ.18 ರಂದು ಖಾದರ್ ಅವರ ಬುದ್ದಿಮಾಂದ್ಯ ಮಗ ಮುಬಾರಕ್ ಶರೀಫ್‌ನನ್ನು ತನ್ನ ಸಹಚರರ ಜೊತೆ ಸೇರಿ ಅಪಹರಿಸಿ ಪಲಮನೇರಿನಲ್ಲಿ ಒತ್ತೆಯಾಗಿಟ್ಟುಕೊಂಡಿದ್ದ. 20 ಲಕ್ಷ ರೂಪಾಯಿ ಕೊಡುವಂತೆ ಬೇಡೆಕೆಯಿಟ್ಟಿದ್ದ. ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅವರ ಜಾಡು ಹಿಡಿದ ಹೊಸಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಆನಂತರ ಸಿಪಿಐ ಎಂ.ಮಲ್ಲೇಶ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶಂಕರ ಅರಹುಣಸಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.