ADVERTISEMENT

ಅಪಹೃತ ಎಂಜಿನಿಯರ್ ಕೃಷ್ಣಮೂರ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 7:10 IST
Last Updated 17 ಡಿಸೆಂಬರ್ 2010, 7:10 IST

ಬೆಂಗಳೂರು:  ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಶವವನ್ನು ತಮಿಳುನಾಡಿನ ತಿರುವಣ್ಣಾಮಲೈನ ಬಳಿ ಎಸೆದು ಪರಾರಿಯಾಗಿದ್ದರು.

ಶವ ಪತ್ತೆಯಾದ ನಂತರ ಆರೋಪಿಗಳ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ಬಿಬಿಎಂಪಿ ಯ ನೌಕರ ಸೇರಿದಂತೆ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ್ ಕುಮಾರ್ (46), ಹರೀಶ್ (18), ರಾಜೇಶ್ (18), ಶಿವಕುಮಾರ್ (21), ಮತ್ತೊಬ್ಬ ಬಾಲಕ ಬಂಧಿತ ಆರೋಪಿಗಳು. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪಾಲಿಕೆಯಲ್ಲಿ ವಯರ್‌ಮನ್ ಆಗಿರುವ ವಿಜಯ್ ಕುಮಾರ್ ಸುಧಾಮನಗರದಲ್ಲಿ ಎ.ಪಿ. ಗಾರ್ಮೆಂರ್ಟ್ಸ್ ಎಂಬ ಸಿದ್ಧ ಉಡುಪು ಕಾರ್ಖಾನೆಯನ್ನೂ ನಡೆಸುತ್ತಿದ್ದನು. ಕೃಷ್ಣಮೂರ್ತಿ ಅವರಿಗೆ ಶ್ರೀನಿವಾಸ್ ಎಂಬುವರ ಮೂಲಕ ವಿಜಯ್ ಪರಿಚಯವಾಗಿದ್ದ. ಕೃಷ್ಣಮೂರ್ತಿ ಅವರ ಕೆಲ ಅನೈತಿಕ ಚಟುವಟಿಕೆಗಳಿಗೆ ವಿಜಯ್ ಸಹಾಯ ಮಾಡುತ್ತಿದ್ದ. ಆದ್ದರಿಂದ ಅವರಿಬ್ಬರ ಮಧ್ಯೆ ಗಾಢ ಸ್ನೇಹವಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸುಮಾರು ಇಪ್ಪತ್ತು ಲಕ್ಷ ರೂಪಾಯಿಯನ್ನು ಕೃಷ್ಣಮೂರ್ತಿ ಅವರು ಆರೋಪಿ ವಿಜಯ್‌ಗೆ ಸಾಲ ನೀಡಿದ್ದರು. ಈ ಹಣವನ್ನು ಹಿಂತಿರುಗಿಸುವಂತೆ ಅವರು ಕೆಲ ದಿನಗಳಿಂದ ಒತ್ತಾಯಿಸುತ್ತಿದ್ದರು.

ಸಾಲ ನೀಡುವಂತೆ ಒತ್ತಡ ಹೇರಿದ್ದರಿಂದ ಆತ ಕೃಷ್ಣಮೂರ್ತಿ ಅವರನ್ನು ಕೊಲೆ ಮಾಡಲು ನಿರ್ಧರಿಸಿದ. ಪೂರ್ವ ನಿಯೋಜಿತ ಸಂಚಿನಂತೆ ಮಂಗಳವಾರ ಕೃಷ್ಣಮೂರ್ತಿ ಅವರನ್ನು ಕೆ.ಎಚ್.ರಸ್ತೆಯಲ್ಲಿರುವ ಲಾಡ್ಜ್‌ವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಗಾರ್ಮೆಂರ್ಟ್ಸ್‌ಗೆ ಕರೆದೊಯ್ದು ಐದೂ ಮಂದಿ ಸೇರಿ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದರು’ ಎಂದು ತಿಳಿಸಿದರು.

‘ಶವವನ್ನು ಸಾಗಿಸಲು ವಾಹನ ಮತ್ತು ಖರ್ಚಿಗೆ ಹಣ ಬೇಕಾಗಿದ್ದ ಕಾರಣ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಕೃಷ್ಣಮೂರ್ತಿ ಅವರ ಮನೆಗೆ ಕರೆ ಮಾಡಿ ಲಂಚ ಪಡೆಯುವಾಗ ಕೃಷ್ಣಮೂರ್ತಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಿಡಲು ಹನ್ನೊಂದು ಲಕ್ಷ ರೂಪಾಯಿ ನೀಡಬೇಕೆಂದು ಆರೋಪಿಗಳು ಬೇಡಿಕೆ ಇಟ್ಟಿದ್ದರು’ ಎಂದು ಬಿದರಿ ವಿವರಿಸಿದರು.

‘ಇದನ್ನು ನಂಬಿದ ಕೃಷ್ಣಮೂರ್ತಿ ಅವರ ಪತ್ನಿ ಮತ್ತು ಮಗ ಕಾರಿನಲ್ಲಿ ಬಂದು ಮೂರು ಲಕ್ಷ ನೀಡಿದ್ದಾರೆ, ಆ ನಂತರ ವಾಹನದಿಂದ ಅವರಿಬ್ಬರನ್ನು ಕೆಳಗಿಳಿಸಿದ ದುಷ್ಕರ್ಮಿಗಳು ಕೆಲ ಹೊತ್ತಿನ ನಂತರ ಕೃಷ್ಣಮೂರ್ತಿ ಅವರನ್ನು ಬಿಟ್ಟು ಕಳುಹಿಸುವುದಾಗಿ ಹೇಳಿ, ಅವರ ಕಾರನ್ನೇ ತೆಗೆದುಕೊಂಡು ಹೋಗಿದ್ದಾರೆ ಆದರೆ ಆ ನಂತರ ಅವರು ಕರೆ ಮಾಡಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಮತ್ತು ಮಗ ಪೊಲೀಸರಿಗೆ ದೂರು ನೀಡಿದ್ದರು’ ಎಂದರು.

ತಮಿಳುನಾಡಿನಲ್ಲಿ ಶವ ಎಸೆದಿದ್ದ ಆರೋಪಿಗಳು: ‘ಹಣ ಮತ್ತು ವಾಹನ ಪಡೆದ ದುಷ್ಕರ್ಮಿಗಳು ತಮಿಳುನಾಡಿನ ತಿರುವಣ್ಣಾಮಲೈನ ತಿಂಡಿವನಂ ಸಮೀಪಕ್ಕೆ ಶವವನ್ನು ಕೊಂಡೊಯ್ದು ಬಾವಿಯೊಂದಕ್ಕೆ ಎಸೆದಿದ್ದರು. ಅಲ್ಲಿಂದ 20 ಕಿ.ಮೀ ಸಾಗಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು. ತಿಂಡಿವನಂನಲ್ಲಿರುವ ವಿಜಯ್‌ನ ಸ್ನೇಹಿತನೊಬ್ಬ ಇದಕ್ಕೆ ಸಹಾಯ ಮಾಡಿದ್ದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಲ್ಲಿನ ಪೊಲೀಸರು ಶವವನ್ನು ಪತ್ತೆ ಮಾಡಿ ನಮಗೆ ಮಾಹಿತಿ ನೀಡಿದ್ದರು’ ಎಂದು ಬಿದರಿ ಹೇಳಿದರು.

‘ವಿಜಯ್ ಹೊರತುಪಡಿಸಿ ಉಳಿದ ಆರೋಪಿಗಳು ಗಾರ್ಮೆಂರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹಣದ ಆಮಿಷ ತೋರಿಸಿದ ವಿಜಯ್ ಅವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಶವವನ್ನು ಎಸೆದ ನಂತರ ಪ್ರತಿಯೊಬ್ಬರಿಗೂ ತಲಾ ಐದು ಸಾವಿರ ರೂಪಾಯಿ ನೀಡಿದ್ದ’ ಎಂದು ಅವರು ತಿಳಿಸಿದರು.

ಒಟ್ಟು ಹಣದಲ್ಲಿ 2.75 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಜಫ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪೊಲೀಸ್ ಕಮಿಷನರ್ ನಿಸಾರ್ ಅಹಮ್ಮದ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.