ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಪತ್ನಿ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಜಿಪುರದ ವೇಣುಗೋಪಾಲಸ್ವಾಮಿ ಲೇಔಟ್‌ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ‘ಒರೇಕಲ್’ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅರೂಫ್ ಮಜುಂದಾರ್ ಎಂಬುವರ ಪತ್ನಿ ಮಧುಮಿತಾ (27) ಆತ್ಮಹತ್ಯೆ ಮಾಡಿಕೊಂಡವರು.
ಪಶ್ಚಿಮ ಬಂಗಾಳ ಮೂಲದ ಮಧುಮಿತಾ ಅವರ ವಿವಾಹವಾಗಿ ನಾಲ್ಕು ವರ್ಷಗಳಾಗಿದ್ದವು. ದಂಪತಿಗೆ ಮೂರು ತಿಂಗಳ ಹೆಣ್ಣು ಮಗುವಿದೆ. ಹೆರಿಗೆಯ ನಂತರ ಮಧುಮಿತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ಪೋಷಕರು ಅವರಿಗೆ ಒಂದು ತಿಂಗಳಿನಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರು ಸಹ ಮಧುಮಿತಾ ಜತೆಯೇ ವಾಸವಿದ್ದರು.
ಮಧುಮಿತಾ, ಮನೆಯ ಸಮೀಪದ ಅಪಾರ್ಟ್‌ಮೆಂಟ್‌ವೊಂದರ ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿರುವ ಸಂಬಂಧಿಯನ್ನು ನೋಡಿಕೊಂಡು ಬರುವುದಾಗಿ ಪೋಷಕರಿಗೆ ತಿಳಿಸಿ ಮಗುವನ್ನು ಅವರ ಬಳಿಯೇ ಬಿಟ್ಟು ಹೋಗಿದ್ದರು. ಆದರೆ ಸಂಬಂಧಿಯನ್ನೂ ಭೇಟಿ ಮಾಡದ ಅವರು ಅಪಾರ್ಟ್‌ಮೆಂಟ್‌ನ ಐದನೇ ಮಹಡಿಗೆ ಹೋಗಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಬಸ್ ಡಿಕ್ಕಿ; ಸಾವು:ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ಳಂದೂರು ವರ್ತುಲ ರಸ್ತೆಯಲ್ಲಿ ಬುಧವಾರ ನಡೆದಿದೆ. ಗೌರಿಬಿದನೂರಿನ ಮಂಜುನಾಥ್ (26) ಮೃತಪಟ್ಟವರು. ಬೈಕ್ ಚಾಲನೆ ಮಾಡುತ್ತಿದ್ದ ಅವರ ಸ್ನೇಹಿತ ಜಯರಾಮ್ ನಾಯಕ್ ಎಂಬುವರ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕರಾದ ಅವರಿಬ್ಬರೂ ಹೆಬ್ಬಗೋಡಿಯಲ್ಲಿ ವಾಸವಿದ್ದರು. ಅವರು ಹೆಬ್ಬಗೋಡಿಯಿಂದ ಗೌರಿಬಿದನೂರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ವೇಗವಾಗಿ ಬಂದ ಬಸ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು.
ನಂತರ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿಗಳ ಬಂಧನ: ಮಾಗಡಿ ರಸ್ತೆ ಸಮೀಪ ನಡೆದಿದ್ದ ಕೆ.ಪ್ರದೀಪ್ (20) ಎಂಬ ಯುವಕನ ಕೊಲೆ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಕೆಂಪಾಪುರ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಕೆಂಪಾಪುರ ಅಗ್ರಹಾರದ ಮಹೇಶ್‌ಕುಮಾರ್ (18), ನವೀನ್ (18), ಮಾಗಡಿ ರಸ್ತೆಯ ನಿಶಾಂತ್ (18) ಮತ್ತು ಮೂಡಲಪಾಳ್ಯದ ರಾಜೇಶ (18) ಬಂಧಿತರು. ಆರೋಪಿ ಮಹೇಶ್‌ಕುಮಾರ್ ಹಾಗೂ ಪ್ರದೀಪ್ ನಡುವೆ ಕ್ಷುಲ್ಲಕ ಕಾರಣಕ್ಕೆ ಕೆಲ ದಿನಗಳ ಹಿಂದೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಆತ ಇತರೆ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಫೆ.28ರಂದು ಪ್ರದೀಪ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿಶಾಂತ್ ಪ್ರಥಮ ವರ್ಷದ ಬಿ.ಕಾಂ ತರಗತಿಯಲ್ಲಿ ಮತ್ತು ರಾಜೇಶ್ ಡಿಪ್ಲೊಮಾ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರಕರಣದ ಮತ್ತಿಬ್ಬರು ಆರೋಪಿ ಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.