ADVERTISEMENT

ಅಪೌಷ್ಟಿಕ: 3 ದಿನಗಳಲ್ಲಿ ಸಮಗ್ರ ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದರಿಂದಾಗಿ ಅಸಂಖ್ಯಾತ ಸಾವು ಸಂಭವಿಸುತ್ತಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳದ ಸರ್ಕಾರದ ಧೋರಣೆಗೆ ಹೈಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

`ಈ ರೀತಿಯ ಸಾವು ಸಂಭವಿಸಲು ಕಾರಣವೇನು, ಅರಿವಿನ ಕೊರತೆಯೇ ಅಥವಾ ಹಣದ ಕೊರತೆಯೇ~ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ರಾಯಚೂರು ಜಿಲ್ಲೆಯಲ್ಲಿ 4ಸಾವಿರಕ್ಕೂ ಅಧಿಕ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಕುರಿತಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಖಾಸಗಿ ಚಾನೆಲ್ ಒಂದರಲ್ಲಿ ಬಂದಿರುವ ವರದಿಯನ್ನು ಆಧರಿಸಿ ವಿಮೋಚನಾ ಸಂಸ್ಥೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ  ಪತ್ರ ಬರೆದಿತ್ತು. ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಲಾಗಿತ್ತು.

ಸರ್ಕಾರದ ವಾದ: `ರಾಯಚೂರು ಜಿಲ್ಲೆಯಲ್ಲಿ ಮಕ್ಕಳು `ಸೆಲೆಬ್ರಲ್ ಪಾಲ್ಸಿ~ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಜ್ಞರ ತಂಡವು ಪರಿಶೀಲನೆ ನಡೆಸಿದೆ. ಕಾಯಿಲೆಗೆ ಚಿಕಿತ್ಸೆ ಸಿಗದ ಕಾರಣ ಮಕ್ಕಳು ಸಾವನ್ನಪ್ಪಿದ್ದಾರೆ~ ಎಂದು ಸರ್ಕಾರದ ಪರ ವಕೀಲರು ಹೇಳಿದರು.

ಅದಕ್ಕೆ ಕ್ಲಿಫ್ಟನ್ ಡಿ~ ರೊಜಾರಿಯೋ ಅವರು (ರಾಜ್ಯದಲ್ಲಿ ಅಪೌಷ್ಟಿಕತೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ಕಾನೂನು ಸಲಹೆಗಾರ) ಅವರು `ಸೆಲೆಬ್ರಲ್ ಪಾಲ್ಸಿ~ ಕಾಯಿಲೆ ಬರುವುದೇ ಅಪೌಷ್ಟಿಕತೆಯಿಂದ~ ಎಂದರು. ರಾಜ್ಯದಲ್ಲಿ ಮಕ್ಕಳು ಆಹಾರದ ಕೊರತೆಯಿಂದ ಯಾವ ರೀತಿ ಸಾಯುತ್ತಿದ್ದಾರೆ ಎಂಬ ಕುರಿತು ಅವರು ವಿವರಿಸಿದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ನುಡಿದರು.

ಸರ್ಕಾರ ನೀಡಿದ್ದ ವರದಿ ಹಾಗೂ ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ನ್ಯಾಯಮೂರ್ತಿಗಳು  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಯಚೂರು ಜಿಲ್ಲೆಯಲ್ಲಿನ ಸಮಸ್ಯೆ ಕುರಿತು ಮೂರು ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ಅವರು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.