ADVERTISEMENT

ಅಭಿಮಾನ್‌ ಸ್ಟುಡಿಯೊ ಜಾಗ ಸ್ವಾಧೀನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2015, 19:40 IST
Last Updated 5 ಆಗಸ್ಟ್ 2015, 19:40 IST

ಬೆಂಗಳೂರು: ‘ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೆ ನಂಬರ್‌ 26ರಲ್ಲಿರುವ ಅಭಿಮಾನ್‌ ಸ್ಟುಡಿಯೊ ಸೇರಿದಂತೆ 60 ಎಕರೆ 20 ಗುಂಟೆ ಜಮೀನನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು’ ಎಂದು ಯುದ್ಧಭೂಮಿ ಹೋರಾಟ ಸೇನೆ ಅಧ್ಯಕ್ಷ ಹೇಮಂತ್‌ರಾಜು ಆಗ್ರಹಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿರಿಯ ನಟ ಟಿ.ಎನ್‌. ಬಾಲಕೃಷ್ಣ ಅವರ ಪುತ್ರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು ಜಾಗದಲ್ಲಿ 20 ಎಕರೆ ಜಾಗವನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ’ ಎಂದು ಆರೋಪ ಮಾಡಿದರು.

‘20 ಎಕರೆ ಜಮೀನಿನ ಪೈಕಿ 10 ಎಕರೆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅವರು ಆ ಜಾಗದಲ್ಲಿ ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದ್ದು, ಸರ್ಕಾರ ಕೂಡಲೇ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಈ ಸಂಬಂಧ ಈಗಾಗಲೇ ಬೆಂಗಳೂರು ಉಪ ವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿದ್ದೇನೆ. ಜೊತೆಗೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ’ ಎಂದರು. ‘ಈ ಜಾಗವನ್ನು ಬಾಲಕೃಷ್ಣ ಮತ್ತು ಅವರ ಕುಟುಂಬಕ್ಕೆ ಸರ್ಕಾರ ಮಂಜೂರು ಮಾಡಿರಲಿಲ್ಲ, ಗುತ್ತಿಗೆಗೂ ಕೊಟ್ಟಿರಲಿಲ್ಲ. ಹಾಗಾಗಿ ಅವರು ಅಕ್ರಮವಾಗಿ ಇತರರಿಗೆ ಮಾರಾಟ ಮಾಡಿರುವ ಜಮೀನನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ಕಂಠೀರವ ಸ್ಟುಡಿಯೊ ಮಾದರಿಯಲ್ಲಿ ಅಭಿಮಾನ್‌ ಸ್ಟುಡಿಯೊ ಅಭಿವೃದ್ಧಿಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.