ADVERTISEMENT

ಅಭಿವೃದ್ಧಿ ಎಂದರೆ ಮರ ಕಡಿಯುವುದಲ್ಲ: ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:05 IST
Last Updated 23 ಜೂನ್ 2012, 19:05 IST

ಬೆಂಗಳೂರು:  `ನಮ್ಮದು `ಹೌದಪ್ಪ~ ಸರ್ಕಾರ.  ಯಾವುದೇ ಹೊಸ ಯೋಜನೆಗಳಿಗೆ ಯಾರೇ ಅನುಮತಿ ಕೋರಿದರೂ ಮುಂದೆ ಹಿಂದೆ ಯೋಚನೆ ಮಾಡದೆ ಅದಕ್ಕೆ `ಯಸ್, ಯಸ್~ ಎಂದು ಅನುಮತಿ ನೀಡುವ ಕಾರಣದಿಂದಲೇ ನಮ್ಮ ರಾಜ್ಯ, ಅದರಲ್ಲೂ ಬೆಂಗಳೂರು, ಅಭಿವೃದ್ಧಿ ಹೆಸರಿನಲ್ಲಿ ಈ ಪರಿ ಕುಲಗೆಟ್ಟು ಹೋಗಿದೆ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಇಲ್ಲಿ ಹೇಳಿದರು.

`ನಮ್ಮಲ್ಲಿ ಅಭಿವೃದ್ಧಿ ಪ್ರಾಧಿಕಾರಗಳು ಹೆಚ್ಚಾಗಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ. ಅಭಿವೃದ್ಧಿ ಎಂದರೆ ಮರ ಕಡಿಯುವುದು ಎಂದೇ ಅಧಿಕಾರಿಗಳ ಭಾವನೆ. ಹೆಚ್ಚು ಮರ ಕಡಿದರೆ ಹೆಚ್ಚು ಅಭಿವೃದ್ಧಿ, ಕಾರ್ಖಾನೆಗಳು ಹೊಗೆ ಉಗುಳಿದಷ್ಟು, ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಎನ್ನುವುದು ನಮ್ಮವರ ಅರ್ಥ. ರಸ್ತೆ ಅಗಲ ಮಾಡುತ್ತಾರೆ, ಪಾದಚಾರಿಗಳಿಗೆ ಜಾಗವೇ ಬಿಡುವುದಿಲ್ಲ. ಆದರೆ ಮರಗಳು ಮಾತ್ರ ಧರೆಗುರುಳುತ್ತಿವೆ. ರಾಜ್ಯದಲ್ಲಿ ಆಡಳಿತ ಕುಸಿದುಬಿಟ್ಟಿದೆ~ ಎಂದು ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಮ್ಮಿಕೊಂಡಿದ್ದ `ಲೋಕ್ ಅದಾಲತ್~ ಕಾರ್ಯಕ್ರಮದಲ್ಲಿ ಅದರ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.

`ಆಸ್ಪತ್ರೆ ಮತ್ತು ಕೈಗಾರಿಕೆಗಳ ತ್ಯಾಜ್ಯ ಕೆರೆ ನೀರಿನ ಜತೆ ಸೇರುವ ಕಾರಣ ಇಡೀ ವಾತಾವರಣವೇ ಕಲುಷಿತಗೊಳ್ಳುತ್ತಿದೆ~ ಎಂದು ದೂರಿ ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಮಿತಿಗೆ ಒಪ್ಪಿಸಿದ್ದು, ಅದು ವಿಚಾರಣೆ ನಡೆಸುತ್ತಿದೆ. ಪರಿಸರ ಮಾಲಿನ್ಯ ತಡೆಯಲು, ಕೆರೆಗಳ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ತಾವು ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡಲು ಅದಾಲತ್‌ಗೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಬಂದಿದ್ದರು. ತಮ್ಮ ತಮ್ಮ ಜಿಲ್ಲೆಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಂತೆ, ನ್ಯಾಯಮೂರ್ತಿಗಳು ಮಧ್ಯೆಯೇ ನಿಲ್ಲಿಸಿ, `ನಿಮ್ಮ ಆಶ್ವಾಸನೆಗಳು ನಮಗೆ ಬೇಡ, ಕೆಲಸ ಮಾಡುವಂತೆ ನಿಮ್ಮ ಅಧೀನದ ಅಧಿಕಾರಿಗಳಿಗೆ ನೀವೆಷ್ಟೇ ನಿರ್ದೇಶನ ಕೊಟ್ಟಿರಬಹುದು, ಸುತ್ತೋಲೆ ಹೊರಡಿಸಿರಬಹುದು. ಅವುಗಳ ಸಂಖ್ಯೆ ನಮಗೆ ಬೇಡ. ಸಮಿತಿಗೆ ಬೇಕಿರುವುದು ಫಲಿತಾಂಶ ಮಾತ್ರ. ಆಶ್ವಾಸನೆ ಕೊಡಲು ಬೇರೆ ವರ್ಗವೇ ಇದೆ. ಅದು ಅವರಿಗಷ್ಟೇ ಸೀಮಿತಗೊಂಡಿರಲಿ~ ಎಂದರು. ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳ ಹೊರ ಭಾಗದಲ್ಲಿ ವಿಪರೀತ ತ್ಯಾಜ್ಯ ಇದ್ದರೂ, ಅಧಿಕಾರಿಗಳು ಆ ನಿಟ್ಟಿನಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಊರ ಹೊರಗೆ ಸಂಚಾರಿ ಪೀಠ...
ಧಾರವಾಡದ ಹೈಕೋರ್ಟ್ ಸಂಚಾರಿ ಪೀಠವು ಊರ ಹೊರಭಾಗದಲ್ಲಿ ಇರುವ ಬಗ್ಗೆ ನ್ಯಾ.ಶೈಲೇಂದ್ರಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  `ನ್ಯಾಯಾಲಯಗಳು ಜನರ ಉಪಯೋಗಕ್ಕೆ ಇರಬೇಕು. ಇಲ್ಲಿ ನೋಡಿದರೆ ಊರ ಹೊರಗಿನ ಕೈಗಾರಿಕೆ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. ಅಷ್ಟು ದೂರ ಹೋಗಲು ಜನರಿಗೂ ಕಷ್ಟ, ವಕೀಲರಿಗೂ ಕಷ್ಟ. ನ್ಯಾಯಮೂರ್ತಿಗಳಿಗೆ ಸೌಲಭ್ಯ ಇರುವ ಕಾರಣ, ಅವರಷ್ಟೇ ಅಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಏನು ಪ್ರಯೋಜನ. ಸಂಪನ್ಮೂಲದ ನಷ್ಟ ಅಷ್ಟೇ~ ಎಂದು ಅವರು ಹೇಳಿದರು.
 

ಹಸಿರು ವಲಯ ರಚನೆ: 3 ತಿಂಗಳ ಗಡುವು
ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ 500ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸುತ್ತವೆ. ಇದರಿಂದ ಆ ಭಾಗದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ ಎಂದಿರುವ ಹೈಕೋರ್ಟ್ ಕಾನೂನು ಸೇವಾ ಸಮಿತಿಯು, ವಿಮಾನ ನಿಲ್ದಾಣದ 25 ಕಿ.ಮೀ. ವ್ಯಾಪ್ತಿಯಲ್ಲಿ `ಹಸಿರು ವಲಯ~ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಸಮಿತಿಯ ಆಶ್ರಯದಲ್ಲಿ ಶನಿವಾರ ನಡೆದ `ಲೋಕ ಅದಾಲತ್~ನಲ್ಲಿ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ, ನಗರಾಭಿವೃದ್ಧಿ ಹಾಗೂ ಅರಣ್ಯ ಇಲಾಖೆಗೆ ಸಮಿತಿ ರಚಿಸಲು ಸೂಚನೆ ನೀಡಲಾಯಿತು. ಮೂರು ತಿಂಗಳ ಒಳಗಾಗಿ ಸಮಗ್ರ ಯೋಜನೆ ಸಿದ್ಧಪಡಿಸಿ ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಸಮಿತಿಯ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರಕುಮಾರ್ ಹಾಗೂ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸೂಚಿಸಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಲೂ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ 29 ಪ್ರಕರಣಗಳನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಈ ಗಣಿಗಳ ಗುತ್ತಿಗೆ ರದ್ದುಪಡಿಸುವಂತೆ ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.

ಆನೆಗಳು ವಾಸಿಸುವ ಪ್ರದೇಶಗಳಲ್ಲಿ ಅವುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ಒಂದು ಸಾವಿರ ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆನೆಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ನಿಗಾವಹಿಸಲು ಸಮಿತಿ ಸೂಚಿಸಿತು.

ಆನೇಕಲ್‌ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ 250 ಕ್ಕೂ ಹೆಚ್ಚು ಗ್ರಾನೈಟ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ದೂಳಿನಿಂದ ನೆರೆಹೊರೆಯ ಜನತೆ ಕ್ಷಯ ಹಾಗೂ ಶ್ವಾಸಕೋಶದ ತೊಂದರೆಗೆ ಒಳಗಾಗುವಂತಾಗಿದೆ ಎಂದು ಅಭಿಪ್ರಾಯಪಟ್ಟ ಅದಾಲತ್, ಇದರ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 360 ಕೋಟಿ ರೂ. ಲಭ್ಯವಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ 125 ಜನ ಪರಿಸರ ಎಂಜಿನಿಯರ್‌ಗಳು ನೇಮಕ ಮಾಡಿಕೊಂಡರೂ ಅವರ ಮೂಲಕ ಪರಿಸರ ಮಾಲಿನ್ಯ ತಡೆಯುವ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಆಗದ ಬಗ್ಗೆಯೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.