ADVERTISEMENT

ಅಭಿವೃದ್ಧಿ: ಪರಿಸರ ಗಮನದಲ್ಲಿರಲಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:00 IST
Last Updated 16 ಸೆಪ್ಟೆಂಬರ್ 2011, 19:00 IST

ಯಲಹಂಕ: `ಹವಾಮಾನದಲ್ಲಿ ವೈಪರೀತ್ಯ ತಲೆದೋರಲು ಓಜೋನ್ ಪದರಕ್ಕೆ ಹಾನಿಯಾಗಿರುವುದೊಂದೇ ಸಮಸ್ಯೆಯಲ್ಲ. ಇನ್ನೂ ಹಲವಾರು ಕಾರಣಗಳಿಂದ ಸಮಸ್ಯೆ ಉಂಟಾಗುತ್ತಿದ್ದು, ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಾಗ ಮಾತ್ರ ಪರಿಸರವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ~ ಎಂದು ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಅಭಿಪ್ರಾಯಪಟ್ಟರು.

ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪರಿಸರ ದಿನ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರಪಂಚದಲ್ಲಿ ಓಜೋನ್ ಪದರಕ್ಕೆ ಹಾನಿಯಾಗಿರುವುದರಿಂದ ಶೇ 4ರಷ್ಟು ತೊಂದರೆಯಿದ್ದರೂ ಇತರೆ ಬಹಳಷ್ಟು ಕಾರಣಗಳಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ಈ ದಿಸೆಯಲ್ಲಿ ಭಾರತ ಎಚ್ಚೆತ್ತುಕೊಳ್ಳದಿದ್ದರೆ ಮನುಷ್ಯನು ಜೀವಿಸಲು ಬೇರೊಂದು ಗ್ರಹವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ~ ಎಂದು ಎಚ್ಚರಿಸಿದ ಅವರು, `ಪರಿಸರವನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಅಭಿವೃದ್ಧಿಗೆ ಒತ್ತು ನೀಡಬೇಕು~ ಎಂದು ಸಲಹೆ ನೀಡಿದರು.

`ಚಿಪ್ಕೊ~ ಚಳವಳಿ ನೇತಾರ ಸುಂದರಲಾಲ್ ಬಹುಗುಣ ಮಾತನಾಡಿ, `ಭವಿಷ್ಯದ ಎಲ್ಲ ಜೀವ ವೈವಿಧ್ಯತೆಗಳನ್ನು ಕಾಪಾಡಿಕೊಂಡು ಹೋಗುವಂತಹ ಅಭಿವೃದ್ಧಿ ಬೇಕೇ ಹೊರತು ಇದೆಲ್ಲವನ್ನೂ ಸರ್ವನಾಶ ಮಾಡುವಂತಹ ಅಭಿವೃದ್ಧಿ ಬೇಕಾಗಿಲ್ಲ. ಯುವ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಸಿಲಿಂಡರ್‌ಗಳನ್ನು ಅಳವಡಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ~ ಎಂದು ಎಚ್ಚರಿಸಿದರು.

`ಅಭಿವೃದ್ಧಿ ಹೆಸರಿನಲ್ಲಿ ಗಾಳಿ, ನೀರು ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಿರುವ ಮಾನವ, ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಅರಣ್ಯ ನಮ್ಮ ಸಂಸ್ಕೃತಿ ಮತ್ತು ಜೀವನಾಡಿ. ಕೇವಲ ಟಿಂಬರ್ ಲಾಭಕ್ಕಾಗಿ ಮರಗಳನ್ನು ಬೆಳೆಸುವ ಬದಲಿಗೆ ಆಮ್ಲಜನಕ ಹಾಗೂ ಮಣ್ಣಿನ ಸವೆತ ತಡೆಗಟ್ಟುವುದಕ್ಕಾಗಿ ಅರಣ್ಯ ಬೆಳೆಸಬೇಕಾಗಿದೆ~ ಎಂದು ಹೇಳಿದರು.

ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಂ.ಪ್ರಕಾಶ್, ನಟ ಸುರೇಶ್ ಹೆಬ್ಳೀಕರ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್. ಹೊನ್ನೇಗೌಡ ಮೊದಲಾದವರು               ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.