ಬೆಂಗಳೂರು: ಹೊಲಿಗೆ ಯಂತ್ರದ ಅಂಗಡಿ ಮಾಲೀಕರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಮೃತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಕಾನ್‌ಸ್ಟೆಬಲ್ ಶೋಯಲ್ ಬುಧವಾರ ಲೋಕಾಯುಕ್ತ ದಾಳಿಯ ಸುಳಿವು ಅರಿತು ಪರಾರಿಯಾಗಿದ್ದಾರೆ.
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಲಂಚಕ್ಕೆ ಒತ್ತಾಯಿಸಿದ್ದ ಬಗ್ಗೆ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಹೊಲಿಗೆ ಯಂತ್ರದ ಅಂಗಡಿ ಮಾಲೀಕನನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ದೌರ್ಜನ್ಯ ನಡೆಸಿರುವ ಬಗ್ಗೆಯೂ ಸಾಕ್ಷ್ಯ ಕಲೆ ಹಾಕಿದ್ದಾರೆ.
ಶಿವಾಜಿನಗರದಲ್ಲಿರುವ ನೂರ್ ಅಹ್ಮದ್ ಎಂಬುವರ ಹೊಲಿಗೆ ಯಂತ್ರದ ಅಂಗಡಿಗೆ ಸೆಪ್ಟೆಂಬರ್ 2ರಂದು ಬಂದಿದ್ದ ರತ್ನಾಕರ ಶೆಟ್ಟಿ, ಕಳವು ಮಾಲು ಖರೀದಿಸಿದ್ದ ಆರೋಪದ ಮೇಲೆ ತಪಾಸಣೆ ನಡೆಸಿದ್ದರು. ಬಳಿಕ ಅಂಗಡಿ ಮಾಲೀಕರನ್ನು ಠಾಣೆಗೆ ಕರೆದೊಯ್ದು ಕಳವು ಮಾಲು ಖರೀದಿಸಿದ ಆರೋಪ ಹೊರಿಸಿ ಹಿಂಸಿಸಿದ್ದರು.
ಅಂಗಡಿಯಲ್ಲಿದ್ದ 45 ಹೊಲಿಗೆ ಯಂತ್ರಗಳನ್ನೂ ಠಾಣೆಗೆ ತೆಗೆದುಕೊಂಡು ಹೋಗಿದ್ದರು.ಮೂರು ದಿನಗಳ ಕಾಲ ಅಂಗಡಿ ಮಾಲೀಕನನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದ ರತ್ನಾಕರ ಶೆಟ್ಟಿ, ಐದು ಲಕ್ಷ ರೂಪಾಯಿ ನೀಡದಿದ್ದರೆ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಒಡ್ಡಿದ್ದರು. ಸೆ.4ರಂದು 50 ಸಾವಿರ ರೂಪಾಯಿ ನೀಡುವುದಾಗಿ ಹೇಳಿ, ನೂರ್ ಅಹ್ಮದ್ ಬಿಡುಗಡೆ ಮಾಡಿಸಿಕೊಂಡಿದ್ದರು.
ಸೋಮವಾರ ಲೋಕಾಯುಕ್ತ ಕಚೇರಿಗೆ ಬಂದು ಪ್ರಕರಣದ ಬಗ್ಗೆ ದೂರು ನೀಡಿದ್ದ ಅವರು, ಲೋಕಾಯುಕ್ತ ಪೊಲೀಸರು ನೀಡಿದ್ದ ರೆಕಾರ್ಡರ್‌ನೊಂದಿಗೆ ಮತ್ತೆ ಠಾಣೆಗೆ ತೆರಳಿದ್ದರು. ಆಗ, ರೂ 2 ಲಕ್ಷ ನೀಡುವಂತೆ ಇನ್‌ಸ್ಪೆಕ್ಟರ್ ಒತ್ತಾಯಿಸಿದ್ದರು.
ಈ ಕುರಿತು ಠಾಣೆಯ ಕಾನ್‌ಸ್ಟೆಬಲ್ ಶೋಯಲ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಶೋಯಲ್ ಜೊತೆ ಚರ್ಚಿಸಿ ರೂ 60 ಸಾವಿರ ನೀಡಲು ಮಾತ್ರ ಸಾಧ್ಯ ಎಂದು ನೂರ್ ಅಹ್ಮದ್ ಹೇಳಿದ್ದರು. ಆಗ ಕಾನ್‌ಸ್ಟೆಬಲ್ ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸಿದ್ದ ಇನ್‌ಸ್ಪೆಕ್ಟರ್ ಬುಧವಾರ ರೂ 75 ಸಾವಿರ ನೀಡುವಂತೆ ಸೂಚಿಸಿದ್ದರು.
ರೆಕಾರ್ಡರ್‌ನಲ್ಲಿ ದಾಖಲಾಗಿರುವ ಮಾತುಕತೆ ವಿವರದಿಂದ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ಈ ಸಂಬಂಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು.
ಈ ಮಧ್ಯೆಯೇ ಲೋಕಾಯುಕ್ತ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದ ನೂರ್ ಅಹ್ಮದ್ ಅವರ ಸಮೀಪದ ಸಂಬಂಧಿ ಜಬೀರ್ ಎಂಬಾತ ಶೋಯಲ್‌ರನ್ನು ಸಂಪರ್ಕಿಸಿ ಸುಳಿವು ನೀಡಿದ್ದ.
ಪೂರ್ವನಿಗದಿಯಂತೆ ಲೋಕಾಯುಕ್ತ ಡಿವೈಎಸ್‌ಪಿ ಅಹದ್, ಇನ್‌ಸ್ಪೆಕ್ಟರ್‌ಗಳಾದ ರವಿಶಂಕರ್ ಮತ್ತು ಅನಿಲ್‌ಕುಮಾರ್ ಅವರು ಅಮೃತಹಳ್ಳಿ ಠಾಣೆಯಲ್ಲಿ ಕಾರ್ಯಾಚರಣೆಗೆ ಹೋದಾಗ ರತ್ನಾಕರ ಶೆಟ್ಟಿ ಹಾಗೂ ಶೋಯಲ್ ಮೊದಲೇ ಸುಳಿವು ಪಡೆದು ಪರಾರಿಯಾಗಿರುವುದು ತಿಳಿಯಿತು.
ಬಳಿಕ ಠಾಣೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ತಂಡ ಶೋಧ ಕಾರ್ಯ ನಡೆಸಿತು. ರತ್ನಾಕರ ಶೆಟ್ಟಿ ಅವರು ಇಲಾಖೆಯ ವಾಕಿ ತೆಗೆದುಕೊಂಡೇ ನಾಪತ್ತೆಯಾಗಿದ್ದಾರೆ. ವಾಕಿ ಮತ್ತು ಮೊಬೈಲ್ ಮೂಲಕ ಆರೋಪಿಗಳನ್ನು ಸಂಪರ್ಕಿಸಲು ತನಿಖಾ ತಂಡ ನಿರಂತರವಾಗಿ ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಸಿಬ್ಬಂದಿಯಿಂದ ಹೇಳಿಕೆ: ನೂರ್ ಅಹ್ಮದ್‌ರನ್ನು ಠಾಣೆಗೆ ಕರೆತಂದು ಹಿಂಸಿಸಿರುವುದು ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಅಮೃತಹಳ್ಳಿ ಪೊಲೀಸ್ ಸಿಬ್ಬಂದಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರತ್ನಾಕರ ಶೆಟ್ಟಿ ಮತ್ತು ಶೋಯಲ್ ಜೊತೆಗೂಡಿ ಹೊಲಿಗೆ ಯಂತ್ರದ ಅಂಗಡಿ ಮಾಲೀಕನನ್ನು ಹಿಂಸಿಸಿ, ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಸಿಬ್ಬಂದಿ ಖಚಿತಪಡಿಸಿದ್ದಾರೆ. ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಎಂ.ಚಂದ್ರಪ್ಪ ಅವರಿಂದಲೂ ಈ ಬಗ್ಗೆ ಹೇಳಿಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.