ADVERTISEMENT

ಅರಣ್ಯ ಒತ್ತುವರಿ ಸಾಬೀತಾದರೆ ನೇಣುಗಂಬಕ್ಕೆ: ರಮೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಬೆಂಗಳೂರು: `ನನ್ನ ವಿರುದ್ಧದ ಅರಣ್ಯ ಒತ್ತುವರಿ ಆರೋಪ ಸಾಬೀತಾದರೆ ನ್ಯಾಯಾಲಯಗಳು ಶಿಕ್ಷೆ ಕೊಡುವವರೆಗೂ ಕಾಯುವುದಿಲ್ಲ. ಅದಕ್ಕೂ ಮೊದಲೇ ನಾನು ನೇಣುಗಂಬಕ್ಕೆ ತಲೆ ಕೊಡುತ್ತೇನೆ...'

ಹೀಗೆ ಭಾವುಕರಾಗಿ ವಿಧಾನಸಭೆಯಲ್ಲಿ ನುಡಿದಿದ್ದು ಕಾಂಗ್ರೆಸ್‌ನ ರಮೇಶಕುಮಾರ್.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಸೋಮವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ತಮ್ಮ ವಿರುದ್ಧದ ಅರಣ್ಯ ಒತ್ತುವರಿ ಆರೋಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಾಸ್ತವ ತಿಳಿಯದ ಅನೇಕರು ಈ ಬಗ್ಗೆ ಆರೋಪ ಮಾಡುತ್ತಾರೆ. ಕೆಲವು ಮಾಧ್ಯಮಗಳು ಕೂಡ ತೇಜೋವಧೆಗೆ ನಿಂತಿವೆ ಎಂದು ಕಿಡಿಕಾರಿದರು.

`ಬಾಲಸುಬ್ರಮಣಿಯನ್ ಮತ್ತು ಎ.ಟಿ.ರಾಮಸ್ವಾಮಿ ಅವರು ಭೂಒತ್ತುವರಿ ಬಗ್ಗೆ ವರದಿ ನೀಡಿದ್ದಾರೆ. ವರದಿಗಳ ಪ್ರಕಾರ ತನಿಖೆ ಮಾಡಿ ತಪ್ಪಿತಸ್ಥರನ್ನು ಗಲ್ಲಿಗೇರಿಸಲಿ. ಒಂದು ವೇಳೆ ನಾನು ತಪ್ಪು ಮಾಡಿರುವುದು ಸಾಬೀತಾದರೆ ಕೋರ್ಟ್ ಶಿಕ್ಷೆ ಕೊಡುವವರೆಗೂ ಕಾಯುವುದಿಲ್ಲ. ಮೊದಲೇ ಹೋಗಿ ನೇಣುಗಂಬದ ಬಳಿ ನಿಲ್ಲುತ್ತೇನೆ' ಎಂದರು.

`ಒತ್ತುವರಿ ಅಂದರೆ ನನ್ನ ಪಾಲಿಗೆ ಮಹಾ ಕಳ್ಳತನ. ಅಂತಹ ಕೃತ್ಯಕ್ಕೆ ಕೈಹಾಕಿದವನು ನಾನಲ್ಲ. ನಾನು ಭೂಮಿ ಖರೀದಿದಾರ ಅಷ್ಟೇ. ಮೂಲ ಮಾಲೀಕನಿಂದ ಏಳು ಮಂದಿ ಖರೀದಿಸಿದ ನಂತರ ಈ ವಿವಾದ ಏಕೆ ಸೃಷ್ಟಿಯಾಯಿತು' ಎಂದು ರಮೇಶಕುಮಾರ್ ಪ್ರಶ್ನಿಸಿದರು.

ವಾಸ್ತವ ಅರಿಯದೆ ಆರೋಪ: `ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅವರ ಮುಖ ನೋಡಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಅವರು ಹೋರಾಟ ಮಾಡಿರಬಹುದು. ಒಳ್ಳೆಯವರೇ ಇರಬಹುದು. ಆದರೆ, ಅವರು ಕೂಡ ವಾಸ್ತವ ಅರಿಯದೆ ಆರೋಪ ಮಾಡುತ್ತಾರೆ. ಯಾರದೋ ಮಾತುಗಳನ್ನು ಕೇಳಿ ಮನಸೋಇಚ್ಛೆ ದೂರುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಇತ್ತೀಚೆಗೆ ತಮಗಾದ ನೋವಿನ ಬಗ್ಗೆ ಸದನದಲ್ಲಿ ಹೇಳಿದರು. ಅವರ ಮಾತು ಕೇಳಿ ನನಗೆ ಅಳುಬಂತು. ಇವತ್ತು ಪ್ರಾಮಾಣಿಕವಾಗಿ ಬದುಕುವುದೇ ಕಷ್ಟವಾಗಿ ಬಿಟ್ಟಿದೆ. ನನ್ನ ಹಿನ್ನೆಲೆ ನೋಡದವರು ವಿನಾಕಾರಣ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದಕ್ಕೆ ಮಾಧ್ಯಮಗಳು ಕೂಡ ಬೆಂಬಲವಾಗಿ ನಿಂತಿವೆ. ಪ್ರಾಮಾಣಿಕರು ಇರುವುದು ಮಾಧ್ಯಮದವರಿಗೂ ಇಷ್ಟ ಇದ್ದಂತಿಲ್ಲ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.