ADVERTISEMENT

ಅರ್ಥ ವ್ಯವಸ್ಥೆ ಶುದ್ಧೀಕರಿಸಿ: ಲೆಕ್ಕಪರಿಶೋಧಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:44 IST
Last Updated 8 ಜುಲೈ 2017, 19:44 IST
ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಶಂಕರ ಬಿದರಿ ಪರಸ್ಪರ ಮಾತುಕತೆ ನಡೆಸಿದ ಕ್ಷಣ. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷೆ ಎ.ಬಿ.ಗೀತಾ, ಕೋತಾ ಎಸ್‌.ಶ್ರೀನಿವಾಸ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಶಂಕರ ಬಿದರಿ ಪರಸ್ಪರ ಮಾತುಕತೆ ನಡೆಸಿದ ಕ್ಷಣ. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷೆ ಎ.ಬಿ.ಗೀತಾ, ಕೋತಾ ಎಸ್‌.ಶ್ರೀನಿವಾಸ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅರ್ಥ ವ್ಯವಸ್ಥೆ ಶುದ್ಧೀಕರಿಸುವ ಮಹತ್ವದ ಹೊಣೆಗಾರಿಕೆ ಲೆಕ್ಕಪರಿಶೋಧಕರ ಮೇಲಿದೆ. ಪರಿಶುದ್ಧ ಅರ್ಥ ವ್ಯವಸ್ಥೆ ಮತ್ತು ಸುಭದ್ರ ರಾಷ್ಟ್ರನಿರ್ಮಾಣಕ್ಕೆ ಲೆಕ್ಕಪರಿಶೋಧಕರು ಸ್ವಾತಂತ್ರ್ಯ ಯೋಧರಂತೆ ಶ್ರಮಿಸಬೇಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ  ಹಾಗೂ ಸಂಸದೀಯ ವ್ಯವಹಾರ ಖಾತೆ ಸಚಿವ ಅನಂತಕುಮಾರ್‌ ಕರೆನೀಡಿದರು.

ನಗರದಲ್ಲಿ ಶನಿವಾರ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ( ಐಸಿಎಐ) ಬೆಂಗಳೂರು ಶಾಖೆ (ಎಸ್‌ಐಆರ್‌) ಸಹಯೋಗದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತು ಆಯೋಜಿಸಿದ್ದ  14ನೇ ರಾಜ್ಯಮಟ್ಟದ ಎರಡು ದಿನಗಳ ಸಮ್ಮೇಳನ ‘ಆವರ್ತನ’ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಭಾರತ ಕಾವ್ಯ ಬರೆಯುವ ಮುನ್ನ ವ್ಯಾಸರು ಗಣಪತಿ ಸ್ತುತಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಅನುಷ್ಠಾನಗೊಳಿಸುವಾಗ ಲೆಕ್ಕಪರಿಶೋಧಕರನ್ನು ಸ್ತುತಿಸಿದ್ದಾರೆ. ಲೆಕ್ಕಪರಿಶೋಧಕರು ನಮ್ಮ ಅರ್ಥ ವ್ಯವಸ್ಥೆಗೆ ‘ಆಧುನಿಕ ಗಣೇಶ’ರಿದ್ದಂತೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ 15 ಸಾವಿರ ಲೆಕ್ಕ ಪರಿಶೋಧಕರಿದ್ದು, ಇದರಲ್ಲಿ 11 ಸಾವಿರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲೆಕ್ಕಪರಿಶೋಧಕರ ವೃತ್ತಿಗೆ ಈಗ ಮತ್ತಷ್ಟು ಮಹತ್ವ ಹಾಗೂ ಮೆರುಗು ಬಂದಿದೆ. ದೇಶದಲ್ಲಿ ಮೂರು ವರ್ಗದ ಜನರಿದ್ದಾರೆ. ಒಂದು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ವರ್ಗ, ಎರಡನೆಯದು ತೆರಿಗೆ ಪಾವತಿಸದ ವರ್ಗ, ಮೂರನೆಯದು ತೆರಿಗೆ ಎಷ್ಟು? ಮತ್ತು ಹೇಗೆ? ಪಾವತಿಸಬೇಕೆನ್ನುವ ಅರಿವಿಲ್ಲದ ವರ್ಗ. ಕೊನೆಯ ಎರಡು ವರ್ಗಗಳಿಗೆ ಅರಿವು ಮತ್ತು ಮಾರ್ಗದರ್ಶನ ನೀಡುವುದು ಲೆಕ್ಕಪರಿಶೋಧಕರ ಹೊಣೆಗಾರಿಕೆ ಎಂದರು.

ಕೇಂದ್ರ ಹಣಕಾಸು ಸಚಿವಾಲಯ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಲು ಸೆಪ್ಟೆಂಬರ್‌ವರೆಗೆ ಗಡುವು ವಿಸ್ತರಿಸಿದೆ ಎಂದರು.

ಎಸ್‌ಐಆರ್‌ಸಿ ಚೆನ್ನೈ  ಶಾಖೆ ಅಧ್ಯಕ್ಷ ಕೋತಾ ಎಸ್‌.ಶ್ರೀನಿವಾಸ್ ಮಾತನಾಡಿ, ಶೇಕಡ 95ರಷ್ಟು ತೆರಿಗೆ ಪಾವತಿ ಲೆಕ್ಕಪರಿಶೋಧಕರ ನೆರವಿನಲ್ಲಿ ನಡೆಯುತ್ತಿದೆ. ವಾರ್ಷಿಕ ₹10 ಲಕ್ಷ ಕೋಟಿಯಿಂದ ₹11 ಲಕ್ಷ ಕೋಟಿವರೆಗೆ ತೆರಿಗೆ ಕಟ್ಟಿಸುತ್ತಿರುವ ಲೆಕ್ಕಪರಿಶೋಧಕರ ಕೊಡುಗೆಯನ್ನು ಕೇಂದ್ರ ಸರ್ಕಾರ ಗುರುತಿಸಬೇಕು ಎಂದು ಮನವಿ ಮಾಡಿದರು.
*
ರಸಗೊಬ್ಬರಕ್ಕೆ ವಿಧಿಸಿದ್ದ ಶೇ 12 ಜಿಎಸ್‌ಟಿಯನ್ನು  ಕೃಷಿಗೆ ಅನುಕೂಲ ಕಲ್ಪಿಸಲು  ಶೇ 5ಕ್ಕೆ ತಗ್ಗಿಸಲಾಗಿದೆ. ಇದರಿಂದ ರಸಗೊಬ್ಬರ ಬೆಲೆ ಇಳಿದಿದೆ.
–ಅನಂತಕುಮಾರ್‌,
ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.