ADVERTISEMENT

ಅಲಯನ್ಸ್‌, ಯೋಗ ವಿಶ್ವವಿದ್ಯಾಲಯದಿಂದ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:20 IST
Last Updated 13 ನವೆಂಬರ್ 2017, 20:20 IST
ವಿ.ಶಂಕರ್‌ ಹಾಗೂ ಬಿ.ಆರ್‌. ಹರೀಶ್‌ ನಾಯಕ್‌ ಪರಿಶೀಲನೆ ನಡೆಸಿದರು
ವಿ.ಶಂಕರ್‌ ಹಾಗೂ ಬಿ.ಆರ್‌. ಹರೀಶ್‌ ನಾಯಕ್‌ ಪರಿಶೀಲನೆ ನಡೆಸಿದರು   

ಬೆಂಗಳೂರು: ನಗರ ಜಿಲ್ಲಾಡಳಿತವು ಆನೇಕಲ್‌ ತಾಲ್ಲೂಕಿನ ಐದು ಕಡೆಗಳಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿ ₹121 ಕೋಟಿ ಮೌಲ್ಯದ 23 ಎಕರೆ 07 ಗುಂಟೆ ಒತ್ತುವರಿಯನ್ನು ತೆರವು ಮಾಡಿತು.

ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ದಕ್ಷಿಣ ಉಪವಿಭಾಗಾಧಿಕಾರಿ ಡಾ.ಬಿ.ಆರ್‌. ಹರೀಶ್‌ ನಾಯಕ್‌ ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿತು.

ಅಲಯನ್ಸ್‌ ವಿಶ್ವವಿದ್ಯಾಲಯವು ಕರ್ಪೂರ ಗ್ರಾಮದಲ್ಲಿ ಸರ್ವೆ ಸಂಖ್ಯೆ 73ರಲ್ಲಿ 4 ಎಕರೆ 14 ಗುಂಟೆ ಹಾಗೂ ಕಾವಲ್‌ ಹೊಸಹಳ್ಳಿಯಲ್ಲಿ ಸರ್ವೆ ಸಂಖ್ಯೆ 52ರಲ್ಲಿ 35 ಗುಂಟೆ ಒತ್ತುವರಿ ಮಾಡಿತ್ತು. ಈ ಜಾಗದಲ್ಲಿ ಕ್ರೀಡಾಂಗಣ ಹಾಗೂ ಉದ್ಯಾನ ನಿರ್ಮಿಸಲಾಗಿತ್ತು. ತಾಲ್ಲೂಕು ಸರ್ವೆಯರ್‌ ನಕ್ಷೆ ಸಿದ್ಧಪಡಿಸಿ ವರದಿ ಸಲ್ಲಿಸಿದ್ದರು. ಜಾಗವನ್ನು ಬಿಟ್ಟುಕೊಡುವಂತೆ ಆನೇಕಲ್‌ ತಹಶೀಲ್ದಾರ್‌ ಅವರು ಈ ವರ್ಷದ ಸೆಪ್ಟೆಂಬರ್‌ 25ರಂದು ನೋಟಿಸ್‌ ನೀಡಿದ್ದರು. 9 ಎಕರೆ 10 ಗುಂಟೆ ಒತ್ತುವರಿಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವಂತೆ ವಿಶೇಷ ಜಿಲ್ಲಾಧಿಕಾರಿ ಅವರು ನ.8ರಂದು ಆದೇಶ ಹೊರಡಿಸಿದ್ದರು. ಅಧಿಕಾರಿಗಳು ಸೋಮವಾರ 5 ಎಕರೆ 10 ಗುಂಟೆ ಸ್ವಾಧೀನಕ್ಕೆ ಪಡೆದರು. ಇದರ ಮೌಲ್ಯ ₹50 ಕೋಟಿ.

ADVERTISEMENT

‘ಇದು ಬಿ– ಖರಾಬು ಜಾಗ. ಈ ಜಾಗದಲ್ಲಿ ರಾಜಕಾಲುವೆ ಇದೆ. ಕೆಲವು ಕಡೆ ಸಮತಟ್ಟು ಮಾಡಲಾಗಿತ್ತು. ಈಗ ಅದನ್ನು ವಶಕ್ಕೆ ಪಡೆದು ಫಲಕ ಹಾಕಿದ್ದೇವೆ’ ಎಂದು ಶಂಕರ್‌ ತಿಳಿಸಿದರು.

ಪ್ರವೇಶ ನಿರಾಕರಣೆ: ಕಾರ್ಯಾಚರಣೆ ವೇಳೆ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ನಡೆಯಿತು. ಆರಂಭದಲ್ಲಿ ಹರೀಶ್‌ ನಾಯಕ್‌ ಹಾಗೂ ತಹಶೀಲ್ದಾರ್ ಆಶಾ ಪರ್ವಿನ್‌ ಅವರಿಗೆ ಪ್ರವೇಶ ನಿರಾಕರಿಸಿದರು. ಎಚ್ಚರಿಕೆ ನೀಡಿದ ಬಳಿಕ ಅನುವು ಮಾಡಿಕೊಟ್ಟರು. ಬಳಿಕ ಜಿಲ್ಲಾಧಿಕಾರಿ ಅವರಿಗಷ್ಟೇ ಪ್ರವೇಶ ನೀಡಿ ಕ್ಯಾಂಪಸ್‌ ಗೇಟ್‌ ಮುಚ್ಚಲಾಯಿತು. ಉಳಿದ ಸಿಬ್ಬಂದಿ ಹಾಗೂ ಮಾಧ್ಯಮದವರು ಹೊರಗೇ ಉಳಿಯಬೇಕಾಯಿತು.

ಭಂಗೀಪುರದಲ್ಲಿ ಸರ್ವೆ ಸಂಖ್ಯೆ 26ರ 4 ಎಕರೆ 34 ಗುಂಟೆ ಗೋಮಾಳ ಜಾಗವನ್ನು ಯೋಗ ವಿಶ್ವವಿಶ್ವವಿದ್ಯಾಲಯ ಒತ್ತುವರಿ ಮಾಡಿತ್ತು. ಈ ಸಂಬಂಧ ತಹಶೀಲ್ದಾರ್‌ ನೋಟಿಸ್‌ ನೀಡಿದ್ದರು. ಈ ಜಾಗವನ್ನು ಸಂಸ್ಥೆಯ ಆಡಳಿತ ಮಂಡಳಿ ಸ್ವ ಇಚ್ಛೆಯಿಂದ ಸೋಮವಾರ ಬಿಟ್ಟುಕೊಟ್ಟಿತು. ಇಲ್ಲಿ ಕಟ್ಟಡಗಳು ನಿರ್ಮಾಣವಾಗಿದ್ದವು. ‘ಇದು ಸಹ ಬಿ– ಖರಾಜು ಜಾಗ. ಇದು ಮೂಲಸ್ವರೂಪ ಕಳೆದುಕೊಂಡಿದೆ. ಇದನ್ನು ಸಕ್ರಮ ಮಾಡುವಂತೆ ವಿ.ವಿ. ಆಡಳಿತ ಮಂಡಳಿ ಮನವಿ ಮಾಡಿತ್ತು. ಈ ಬಗ್ಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಅಹವಾಲು ಸ್ವೀಕರಿಸಿ ದಂಡ ವಸೂಲಿ ಮಾಡಿ ಸಕ್ರಮ ಮಾಡಲು ಕಂದಾಯ ಇಲಾಖೆಯ ಕಾನೂನಿನಲ್ಲಿ ಅವಕಾಶ ಇದೆ’ ಎಂದು ಶಂಕರ್ ತಿಳಿಸಿದರು.

ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯಲ್ಲಿ ಸರ್ವೆ ಸಂಖ್ಯೆ 52/1, 52/3ರ ಸರ್ಕಾರಿ ಖರಾಬು 7 ಎಕರೆ 3 ಗುಂಟೆ, ಸರ್ಜಾಪುರ ನಾರಾಯಣಘಟ್ಟದ 2 ಎಕರೆ 33 ಗುಂಟೆ ಕೆರೆ, ಜಿಗಣಿ ಹಾರಹದ್ದೆಯ 3 ಎಕರೆ 07 ಗುಂಟೆ ಕೆರೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.