ADVERTISEMENT

ಅವಸಾನದ ಅಂಚಿಗೆ ಬೇಗೂರು ಕೆರೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:45 IST
Last Updated 27 ಮಾರ್ಚ್ 2018, 19:45 IST
ಅವಸಾನದ ಅಂಚಿಗೆ ಬೇಗೂರು ಕೆರೆ
ಅವಸಾನದ ಅಂಚಿಗೆ ಬೇಗೂರು ಕೆರೆ   

ಬೆಂಗಳೂರು: ನಾಲ್ಕಾರು ಹಳ್ಳಿಗಳಿಗೆ ಸಿಹಿನೀರಿನ ಕೊಳವಾಗಿದ್ದ ಬೇಗೂರು ಕೆರೆ ಇಂದು ಅವಸಾನದ ಅಂಚಿನಲ್ಲಿದೆ.

15 ವರ್ಷಗಳ ಹಿಂದೆ ತಿಳಿನೀರಿನಿಂದ ತುಂಬಿ ತುಳುಕುತ್ತಿತ್ತು. ಚಿಕ್ಕಬೇಗೂರು, ಗಾರ್ವೆಬಾವಿಪಾಳ್ಯ, ಸಿಂಗಸಂದ್ರ ಗ್ರಾಮಗಳ ಜನ ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು.

ಜಲಮೂಲದಲ್ಲಿ ಈಗ ಜೊಂಡು ಬೆಳೆದು ಹಂದಿಗಳ ಆವಾಸಸ್ಥಾನವಾಗಿದೆ. ರಾಜಕಾಲುವೆಗಳ ಮೂಲಕ ಕೊಳಚೆ ನೀರು, ಕೈಗಾರಿಕೆಗಳ ತ್ಯಾಜ್ಯ ಕೆರೆಯ ಒಡಲನ್ನು ಸೇರುತ್ತಿದೆ. ಕಟ್ಟಡ ತ್ಯಾಜ್ಯ ತಂದು ಕೆರೆಗೆ ಸುರಿಯಲಾಗುತ್ತಿದೆ. ಕೆಲ ಅಪಾರ್ಟ್‍ಮೆಂಟ್‍ ಸಮುಚ್ಚಯಗಳ ಕೊಳಚೆ ನೀರಿನ ಪೈಪ್‌ಗಳನ್ನು ಕೆರೆಗೆ ಸಂಪರ್ಕಿಸಲಾಗಿದೆ. ಜಲಮೂಲದ ವಿಸ್ತೀರ್ಣ 29 ಎಕರೆ. ಇದರಲ್ಲಿ ಮೂರು ಎಕರೆಯಷ್ಟು ಒತ್ತುವರಿಯಾಗಿದೆ.

ADVERTISEMENT

‘ಕೆರೆ ಸಂಪೂರ್ಣ ಹಾಳಾಗಿರುವುದು ನಿಜ. ಅದರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎನ್ನುತ್ತಾರೆ ಬೇಗೂರು ವಾರ್ಡ್‌ ಪಾಲಿಕೆ ಸದಸ್ಯ ಎಂ.ಆಂಜನಪ್ಪ.

ಜಲಮೂಲದ ದಕ್ಷಿಣ ಭಾಗದಲ್ಲಿ ಬಡಾವಣೆ ನಿರ್ಮಾಣವಾಗುತ್ತಿದ್ದು, ಕೆರೆ ಒತ್ತುವರಿ ಮಾಡಿ ಕಾಂಪೌಂಡ್ ಹಾಕಲಾಗಿದೆ ಎಂದು ಸ್ಥಳೀಯರು ದೂರಿದರು

‌‘ಮೀಸಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ. ಜತೆಗೆ, ಬಡಾವಣೆ ನಿರ್ಮಿಸುತ್ತಿರುವ ಕಂಪನಿಗೂ ಎರಡು ನೋಟಿಸ್ ನೀಡಲಾಗಿದೆ. ಆದರೆ ಯಾವುದೇ ಉತ್ತರ ಬಂದಿಲ್ಲ. ರಾಜಕೀಯ ಪ್ರಭಾವ ಬಳಸಿ ಲೇಔಟ್ ನಿರ್ಮಿಸುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಎಂಜಿನಿಯರ್ ತಿಳಿಸಿದರು.

2–3 ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಪಾಲಿಕೆಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.