ADVERTISEMENT

ಅಸಮಾನತೆ ವಿರುದ್ಧ ಬಂಡಾಯವೆದ್ದ ಮಹಾನ್ ಚೇತನ ಬಸವಣ್ಣ

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST

ಬೆಂಗಳೂರು: `ಬಸವಣ್ಣ ಬೋಧಿಸಿದ ತತ್ವಗಳಲ್ಲಿ ಶೇ 10ರಷ್ಟು ಅಂಶಗಳನ್ನು ಅಳವಡಿಸಿಕೊಂಡರೇ ಉತ್ತಮ ವ್ಯಕ್ತಿಯಾಗಿ ಬದುಕಬಹುದು. ಜಾತಿ, ಅಸಮಾನತೆಯ ವಿರುದ್ಧ ಬಂಡಾಯವೆದ್ದ ಮಹಾನ್ ಚೇತನ ಬಸವಣ್ಣ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಬಸವ ವೇದಿಕೆಯು ಬಸವ ಜಯಂತಿ ಪ್ರಯುಕ್ತ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಬಸವಣ್ಣ ಬೋಧಿಸಿದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ ಮಾತ್ರ ಅಭಿವೃದ್ಧಿಯಲ್ಲ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸುವುದೇ ಅಭಿವೃದ್ಧಿ~ ಎಂದು ಅವರು ಹೇಳಿದರು.

`ಎಲ್ಲ ಶ್ರೇಷ್ಠ ತತ್ವಗಳನ್ನು ನೀಡಿದ ವೀರಶೈವ ಧರ್ಮವು ಕಾಯಕ ನಿಷ್ಠೆಯನ್ನು ಪ್ರತಿಪಾದಿಸುತ್ತದೆ. ಪ್ರಾಮಾಣಿಕವಾಗಿ ದುಡಿದರೆ ಎಲ್ಲವೂ ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಸುಧಾರಣೆಯೆಂಬುದು ವ್ಯಕ್ತಿಗತವಾಗಿ ಆರಂಭಗೊಳ್ಳಬೇಕಿದೆ~ ಎಂದು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, `ವೀರಶೈವ ತತ್ವಗಳ ಕುರಿತು ಅಧ್ಯಯನ ನಡೆಸಲು ನಗರದಲ್ಲಿ ಬಸವಣ್ಣ ಸಂಶೋಧನಾ ಕೇಂದ್ರ ಸ್ಥಾಪನೆಗೆ ನನ್ನ ಅವಧಿಯಲ್ಲಿ 25 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರಬೇಕು~ ಎಂದರು.
 
ಇದೇ ಸಂದರ್ಭದಲ್ಲಿ ಹಿರಿಯ ಕವಿ ಡಾ.ಚನ್ನವೀರ ಕಣವಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಯಿತು. ಸಚಿವರಾದ ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಗೋವಿಂದ ಎಂ.ಕಾರಜೋಳ, ವೇದಿಕೆಯ ಉಪಾಧ್ಯಕ್ಷ ಡಾ.ಸಿ.ಸೋಮಶೇಖರ್ ಇದ್ದರು.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT