ADVERTISEMENT

ಆಟೊ ಇಲ್ಲದೆ ಪರದಾಟ...

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 19:53 IST
Last Updated 20 ಫೆಬ್ರುವರಿ 2013, 19:53 IST
ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಮಹಿಳೆಯೊಬ್ಬರು ನವಜಾತ ಶಿಶು ಹಾಗೂ ಕುಟುಂಬ ಸದಸ್ಯರೊಂದಿಗೆ ಸರಕು ಸಾಗಣೆ ಆಟೊದಲ್ಲೇ ದೊಡ್ಡಬಳ್ಳಾಪುರಕ್ಕೆ ತೆರಳಿದ ದೃಶ್ಯ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಕಂಡುಬಂತು
ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಮಹಿಳೆಯೊಬ್ಬರು ನವಜಾತ ಶಿಶು ಹಾಗೂ ಕುಟುಂಬ ಸದಸ್ಯರೊಂದಿಗೆ ಸರಕು ಸಾಗಣೆ ಆಟೊದಲ್ಲೇ ದೊಡ್ಡಬಳ್ಳಾಪುರಕ್ಕೆ ತೆರಳಿದ ದೃಶ್ಯ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಕಂಡುಬಂತು   

ಬೆಂಗಳೂರು:  ಆಟೊ ಚಾಲಕರ ಸಂಘಟನೆಗಳ ಸದಸ್ಯರು ನಗರದಲ್ಲಿ ಬುಧವಾರ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಯಿತು.

ನಗರದಲ್ಲಿ ಸುಮಾರು 80 ಸಾವಿರ ಆಟೊಗಳಿದ್ದು, ಬಹುತೇಕ ಚಾಲಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ರೈಲು ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಪ್ರಯಾಣಿಕರು ಆಟೊ ಇಲ್ಲದೆ ಪರದಾಡಿದರು. ಆದರೆ, ಕೆಲ ಚಾಲಕರು ಪ್ರಯಾಣಿಕರಿಗೆ ಎಂದಿನಂತೆ ಸೇವೆ ಒದಗಿಸಿದರು. ಜತೆಗೆ, ಬಿಎಂಟಿಸಿ ಬಸ್‌ಗಳು ಸೇವೆ ಕಲ್ಪಿಸಿದ್ದರಿಂದ ಸಾರ್ವಜನಿಕರಿಗೆ ಅಷ್ಟೇನು ತೊಂದರೆಯಾಗಲಿಲ್ಲ. ಮುಷ್ಕರವನ್ನು ಬೆಂಬಲಿಸದೆ ಆಟೊ ಓಡಿಸುತ್ತಿದ್ದ ಚಾಲಕರನ್ನು ಕೆಲವರು ಅಡ್ಡಗಟ್ಟಿ ಸಂಚಾರ ಸ್ಥಗಿತಗೊಳಿಸುವಂತೆ ಒತ್ತಡ ಹೇರುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಆಟೊ ಚಾಲಕರು ಬೆಳಿಗ್ಗೆ ಆರು ಗಂಟೆಯಿಂದಲೇ ಸೇವೆ ಸ್ಥಗಿತಗೊಳಿಸಿದ್ದರು. ಇದರಿಂದ ಮನೆ, ಕಚೇರಿ ಮುಂತಾದೆಡೆ ಹೋಗಬೇಕಾದವರು ಬಿಎಂಟಿಸಿ ಬಸ್‌ಗಳನ್ನೇ ಆಶ್ರಯಿಸಬೇಕಾಯಿತು. ಮುಷ್ಕರದ ಲಾಭ ಪಡೆದ ಕೆಲ ಆಟೊ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಹೆಚ್ಚಿನ ಆಟೊಗಳು ರಸ್ತೆಗಳಿದವು.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಿಐಟಿಯು ಆಟೊ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, `ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆಗೆ ಈಗಾಗಲೇ ತೊಂದರೆಯಾಗಿದೆ. ಈ ನಡುವೆ ಸರ್ಕಾರ ಪೆಟ್ರೊಲ್, ಡೀಸೆಲ್, ಎಲ್‌ಪಿಜಿ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದರಿಂದ ಚಾಲಕರು ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ಜತೆಗೆ ಸಿಲಿಂಡರ್‌ಗಳ ಪೂರೈಕೆಗೂ ಮಿತಿ ಹೇರಿರುವುದು ನಮ್ಮನ್ನು ಸಂಕಷ್ಟಕ್ಕೀಡು ಮಾಡಿದಂತಾಗಿದೆ. ಹೀಗಾಗಿ ಸರ್ಕಾರದ ನೀತಿಗಳನ್ನು ಖಂಡಿಸಿ ಮೊದಲ ದಿನದ ಮುಷ್ಕರವನ್ನು ಸರ್ವಾನುಮತದಿಂದ ಬೆಂಬಲಿಸಿದ್ದೇವೆ. ಗುರುವಾರವೂ ನಮ್ಮ ಬೆಂಬಲ ಹೀಗೆ ಇರುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.