
ಬೆಂಗಳೂರು: ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಭಿಪ್ರಾಯಪಟ್ಟರು. ಶನಿವಾರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಅವರು ಅನುವಾದಿಸಿರುವ ‘ರಾಜೀವಗಾಂಧಿ ಕಗ್ಗೊಲೆ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯಾವುದೇ ಸರ್ಕಾರಿ ಸಂಸ್ಥೆಯ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಸಂಸ್ಥೆಗಳ ಗೌರವಕ್ಕೆ ಚ್ಯುತಿಯಾಗದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ರಾಜಕೀಯವೇ ಹೆಚ್ಚಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ರಾಜ್ಯವನ್ನು ತಮ್ಮ ಸ್ವಂತ ಆಸ್ತಿ ಎಂದು ಭಾವಿಸಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜೊತೆಗಿನ ಒಡನಾಟ ನೆನಪಿಸಿಕೊಂಡ ರಾಜ್ಯಪಾಲರು, ‘ಶ್ರೀಲಂಕಾದಲ್ಲಿನ ಭಾರತೀಯ ಸೇನಾ ಕಾರ್ಯಾಚರಣೆ ನಂತರ ಎಲ್‌ಟಿಟಿಇ ಪ್ರತಿನಿಧಿಗಳನ್ನು ರಾಜೀವಗಾಂಧಿ ಅವರು ಭೇಟಿಯಾಗಿದ್ದು ರಾಜತಾಂತ್ರಿಕವಾಗಿ ತಪ್ಪು ನಡೆಯಾಗಿತ್ತು. ಈ ಪ್ರಕರಣವೇ ಅವರಿಗೆ ಮುಳುವಾಯಿತು’ ಎಂದು ಅಭಿಪ್ರಾಯಪಟ್ಟರು.
‘ಇಂದಿರಾಗಾಂಧಿ ಅವರ ಕೋರಿಕೆಯಂತೆ ರಾಜೀವ್‌ಗಾಂಧಿ ಅವರನ್ನು ರಾಜಕೀಯಕ್ಕೆ ಕರೆತಂದು ಅಮೇಠಿಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ನಂತರ ನನ್ನನ್ನು ಸಲಹೆಗಾರರನ್ನಾಗಿಯೂ ನೇಮಿಸಿಕೊಂಡರು. ಜತೆಗೆ ನನ್ನನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡುವುದಕ್ಕೂ ಈ ಘಟನೆ ಕಾರಣವಾಯಿತು’ ಎಂದು ಅವರು ನೆನೆಪಿಸಿಕೊಂಡರು.
ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ ನಂತರ ರಾಜೀವಗಾಂಧಿ ಅವರ ವ್ಯಕ್ತಿತ್ವದ ಘನತೆ ಕಡಿಮೆಯಾಯಿತು. ಈ ಬಗ್ಗೆ ರಾಜೀವಗಾಂಧಿ ಅವರಿಗೂ ಬೇಸರ ಉಂಟಾಗಿತ್ತು ಎಂದರು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ರಾಜೀವಗಾಂಧಿ ಅವರ ಹತ್ಯೆಯ ಪ್ರಕರಣ ಮತ್ತು ತನಿಖೆ ರಾಜಕೀಯ ಲಾಭಕ್ಕೂ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ.
ಈ ಬಗ್ಗೆ ರಾಜೀವಗಾಂಧಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ನಿವೃತ್ತ ನಿರ್ದೇಶಕ ಡಿ.ಆರ್. ಕಾರ್ತೀಕೇಯನ್ ಅವರೇ ಮತ್ತೊಂದು ಕೃತಿ ರಚಿಸಬೇಕು. ಆದರೆ, ಅದನ್ನು 20 ವರ್ಷಗಳ ನಂತರ ಬಿಡುಗಡೆ ಮಾಡಬೇಕು ಎಂದರು. ಕಾರ್ತೀಕೇಯನ್, ಡಿ.ವಿ. ಗುರುಪ್ರಸಾದ್, ಗೃಹ ಸಚಿವ ಕೆ.ಜೆ. ಜಾರ್ಜ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಸುಂದರ ಪ್ರಕಾಶನದ ಗೌರಿ ಸುಂದರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.