ಬೆಂಗಳೂರು: ‘ಲೋಕಾಯುಕ್ತ ಸಂಸ್ಥೆಯು ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಇದೆಯೇ ಹೊರತು, ಭ್ರಷ್ಟಾಚಾರ ನಿಗ್ರಹಕ್ಕಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಹೇಳಿದರು.
ಕರ್ನಾಟಕ ವಿಶ್ವಮಾನವ ಸಂಸ್ಥೆಯು ಹನುಮಂತನಗರದ ಪಿಇಎಸ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ವಿಶ್ವಮಾನವ ಪ್ರಶಸ್ತಿ’ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
‘ಲೋಕಾಯುಕ್ತ ಸಂಸ್ಥೆ ಎಂದರೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಎಂದೇ ಭಾವಿಸಲಾಗಿದೆ. ಲೋಕಾಯುಕ್ತಕ್ಕೂ, ಭ್ರಷ್ಟಾಚಾರ ನಿಯಂತ್ರಣಕ್ಕೂ ಸಂಬಂಧ ಇಲ್ಲ. ಹೀಗಾಗಿ ಲೋಕಾಯುಕ್ತ ಕಾಯ್ದೆಯಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಬೇರ್ಪಡಿಸಬೇಕು’ ಎಂದು ಅಭಿಪ್ರಾಯಪಟ್ಟರು.
‘ಸರ್ಕಾರ ಜಾರಿಗೆ ತರುವ ಯೋಜನೆಗಳು ವಿಳಂಬವಾಗದೆ ಶೀಘ್ರ ಸಾರ್ವಜನಿಕರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸವನ್ನು ಸಂಸ್ಥೆ ಮಾಡಬೇಕು. ನಾನು ಲೋಕಾಯುಕ್ತನಾಗಿದ್ದ ವೇಳೆ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಆ ಕೆಲಸ ಮಾಡಿದೆ’ ಎಂದು ಹೇಳಿದರು.
‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಾದರೆ ಕ್ರಮ ಜರುಗಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇಲ್ಲ’ ಎಂದರು. ‘ಸಂಸ್ಥೆಯು ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಐದು ಜಿಲ್ಲೆಗಳಿಗೆ ಒಬ್ಬ ಲೋಕಾಯುಕ್ತರನ್ನು ನೇಮಕ ಮಾಡಬೇಕು. ಆ ಮೂಲಕ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸ ಆಗಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.