ADVERTISEMENT

ಆದಾಯ ₨10 ಲಕ್ಷ, ಖರ್ಚು ₨1.10 ಕೋಟಿ!

ಬೆಂಗಳೂರು ವಿವಿ: ಮುಂದಿನ ವರ್ಷದಿಂದ ಹೊರಗುತ್ತಿಗೆ ಬಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 20:13 IST
Last Updated 2 ಡಿಸೆಂಬರ್ 2013, 20:13 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊರಗುತ್ತಿಗೆ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

‘ವಿವಿಯಲ್ಲಿ ಈಗ 18 ಹೊರಗುತ್ತಿಗೆ ಬಸ್‌ಗಳು ಇವೆ. ಇವುಗಳಿಂದ ಬರುವ ಆದಾಯ ₨10 ಲಕ್ಷ. ತಗಲುವ ವೆಚ್ಚ ₨1.10 ಕೋಟಿ. ಗಣೇಶ ಮಂದಿರ, ಮೈಸೂರು ರಸ್ತೆ ಹಾಗೂ ಕೆಂಗೇರಿ ಮಾರ್ಗ ಹೊರತುಪಡಿಸಿ ಉಳಿದ ಮಾರ್ಗಗಳಲ್ಲಿ ಪ್ರಯಾಣಿಕರು ವಿರಳ ಸಂಖ್ಯೆಯಲ್ಲಿ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಬಸ್‌ಗಳನ್ನು ರದ್ದುಪಡಿಸಲು ತೀರ್ಮಾನಿಸಲಾಯಿತು’ ಎಂದು ತಿಮ್ಮೇಗೌಡ ಸುದ್ದಿಗಾರರಿಗೆ ತಿಳಿಸಿದರು.

‘ಕೂಡಲೇ ಏಳು ಬಸ್‌ಗಳ ಸಂಚಾರವನ್ನು ರದ್ದು ಮಾಡಿ 11 ಬಸ್‌ಗಳನ್ನು ಜನವರಿಯಿಂದ ಜೂನ್‌ ವರೆಗೆ ಓಡಿಸಲಾಗುವುದು. ಬಳಿಕ ಇವುಗಳ ಸೇವೆ ಸ್ಥಗಿತಗೊಳ್ಳಲಿದೆ. ಬಿಎಂಟಿಸಿ ಬಸ್‌ಗಳು ಯಥಾರೀತಿಯಲ್ಲಿ ಸಂಚಾರ ನಡೆಸಲಿವೆ’ ಎಂದರು. ಐದು ಬಿ.ಇಡಿ ಕಾಲೇಜಿಗೆ ಅನುಮತಿ: ಶನಿವಾರ ನಡೆದ ಅಕಾಡೆಮಿಕ್‌ ಕೌನ್ಸಿಲ್ ಸಭೆಯಲ್ಲಿ ಸಮರ್ಪಕ ಮೂಲಸೌಕರ್ಯ ಹೊಂದಿರುವ 10 ಬಿ.ಇಡಿಗಳ ಕಾಲೇಜುಗಳ ಮಾನ್ಯತೆ ನವೀಕರಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ಸಿಂಡಿಕೇಟ್‌ ಸಭೆಯಲ್ಲಿ ಐದು ಕಾಲೇಜುಗಳಿಗೆ ಮಾತ್ರ ಮಾನ್ಯತೆ ನವೀಕರಣ ಮಾಡಲು ಅನುಮೋದನೆ ನೀಡಲಾಗಿದೆ.

ಮಿರಾಂಡ ಕಾಲೇಜ್‌ ಆಫ್‌ ಎಜುಕೇಶನ್‌, ಎಸ್‌ಜೆಇಎಸ್‌ ಕಾಲೇಜ್‌  ಆಫ್‌ ಎಜುಕೇಶನ್‌, ಕೋಲಾರದ ರಾಕ್‌ ವ್ಯಾಲಿ ಕಾಲೇಜ್‌ ಆಫ್‌ ಎಜುಕೇಶನ್‌, ಮಾರತಹಳ್ಳಿಯ ಎಂ.ವಿ.ಜೆ.ಕಾಲೇಜ್‌ ಆಫ್‌ ಎಜುಕೇಶನ್‌, ಚಿಂತಾಮಣಿಯ ಪ್ರಗತಿ ಕಾಲೇಜ್‌ ಆಫ್‌ ಎಜುಕೇಶನ್‌ಗೆ ಮಾನ್ಯತೆ ನೀಡಲಾಗಿದೆ.

‘ಈಗಾಗಲೇ ಸಂಯೋಜನೆ ಪಡೆಯಲು ಸಾಧ್ಯವಾಗದೆ ಇರುವ 25 ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೂಲಸೌಕರ್ಯ ಹಾಗೂ ಎನ್‌ಸಿಟಿಇ ನಿಯಮದಂತೆ ಶಿಕ್ಷಕರ ನೇಮಕ ಮಾಡಿಕೊಂಡರೆ ಸಂಯೋಜನೆ ನವೀಕರಣ ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಪದವಿ ಕೋರ್ಸ್‌ಗಳಿಗೆ ಸಂಯೋಜನೆ ಆರಂಭ: ‘ಬಿ.ಇಡಿ, ಬಿ.ಪಿ.ಇಡಿ ಹಾಗೂ ಎಂ.ಪಿ.ಇಡಿ ಹೊರತುಪಡಿಸಿ ಬೇರೆ ಪದವಿ ಕಾಲೇಜುಗಳಿಗೆ ಸಂಯೋಜನೆ ನೀಡಲು 26 ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ)ಗಳನ್ನು ನೇಮಕ ಮಾಡಲಾಗುವುದು. 2014ರ   ಜನವರಿ ಅಂತ್ಯದೊಳಗೆ ಸಂಯೋಜನೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

481 ಕಾಲೇಜುಗಳು ಸಂಯೋಜನೆ ನವೀಕರಣಕ್ಕೆ ಹಾಗೂ 45 ಕಾಲೇಜುಗಳು ಹೊಸ ಸಂಯೋಜನೆಗೆ ಅರ್ಜಿ ಸಲ್ಲಿಸಿವೆ. ಬಿ.ಇಡಿ ಅಥವಾ  ಪದವಿ ಕೋರ್ಸ್‌ಗಳ ಶುಲ್ಕ ಹೆಚ್ಚಳದ ಪ್ರಸ್ತಾವ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ, ಕುಲಸಚಿವ (ಮೌಲ್ಯಮಾಪನ) ಡಾ.ಆರ್‌.ಕೆ. ಸೋಮಶೇಖರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT