ADVERTISEMENT

ಆಧಾರ್ ಯೋಜನೆ: ಪ್ರಶ್ನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಆಧಾರ್ ಯೋಜನೆಯಡಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿ) ಸಂಗ್ರಹಿಸುತ್ತಿರುವ ವೈಯಕ್ತಿಕ ವಿವರಗಳು ಬಹುರಾಷ್ಟೀಯ ಕಂಪೆನಿಗಳಿಗೆ ವರದಾನವಾಗಲಿವೆಯೇ? ಗುಜರಾತ್ ಮತ್ತು ಶ್ರೀಲಂಕಾದಲ್ಲಿ ನಡೆದಂಥ ಜನಾಂಗೀಯ ಹತ್ಯಾಕಾಂಡಕ್ಕೆ ಇದು ಎಡೆ ಮಾಡಿಕೊಡುತ್ತದೆಯೇ? ಸಂಸತ್‌ನಲ್ಲಿ ಚರ್ಚೆಯಾಗದೇ, ಒಪ್ಪಿಗೆ ಪಡೆಯದೇ ನೀಡಲಾಗುತ್ತಿರುವ ಗುರುತಿನ ಸಂಖ್ಯೆಗೆ ಮಾನ್ಯತೆ ಸಿಗುವುದೇ?
ಇಂಥ ಹಲವಾರು ಪ್ರಶ್ನೆಗಳು ತೂರಿ ಬಂದಿದ್ದು, ಸಿವಿಕ್ ಸಂಸ್ಥೆಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶಿಷ್ಟ ಗುರುತಿನ ಚೀಟಿ ವಿತರಣೆ ಕುರಿತ ಸಂವಾದದಲ್ಲಿ.

ಆಧಾರ್‌ಗಾಗಿ ಯುಐಡಿ ಪ್ರಾಧಿಕಾರ ಸಂಗ್ರಹಿಸುವ ಮಾಹಿತಿ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮೇಲೆ ಮಾಡಲಾಗುತ್ತಿರುವ ದಾಳಿ. ಭಯೋತ್ಪಾದಕರೂ ಸುಲಭವಾಗಿ ಈ ಸಂಖ್ಯೆಯನ್ನು ಪಡೆಯಬಹುದಾಗಿದೆ. ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ ಎಂದು ಗ್ರಾಹಕ ಶಕ್ತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಕೆ.ಸೋಮಶೇಖರ್ ಆರೋಪಿಸಿದರು.

ಆಧಾರ್‌ಗಾಗಿ ಸಂಗ್ರಹಿಸಿದ ನಾಗರಿಕರ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿ ಇಟ್ಟಾಗ ಹ್ಯಾಕಿಂಗ್ ಮೂಲಕ ಕದಿಯಬಹುದಾಗಿದೆ. ಆಧಾರ್ ಸಂಖ್ಯೆ ನೀಡಲು ಅಮೆರಿಕದ ಎಲ್1 ಐಡೆಂಟಿಟಿ ಸೊಲ್ಯೂಷನ್ಸ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಆ ಸಂಸ್ಥೆ ದೇಶದ ರಹಸ್ಯಗಳನ್ನು ಇತರ ದೇಶಗಳಿಗೆ ತಿಳಿಸಬಹುದು. ಇದು ದೇಶಕ್ಕೆ ಗಂಡಾಂತರಕಾರಿ ಎಂದರು.

ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಉಪನಿರ್ದೇಶಕ ಅಶೋಕ್ ದಳವಾಯಿ, `ಸರ್ಕಾರದಿಂದ ಅನುಮತಿ ಪಡೆದೇ ಗುರುತಿನ ಸಂಖ್ಯೆ ನೀಡಲಾಗುತ್ತಿದ್ದು, ಒಪ್ಪಿಗೆ ನೀಡದೇ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತದೆಯೇ? ದೇಶದಲ್ಲಿ 12 ಕೋಟಿ ಜನರಿಗೆ ತಾವು ಭಾರತೀಯರು ಎಂಬುದಕ್ಕೆ ದಾಖಲೆಗಳಿಲ್ಲ. ಹಾಗಾಗಿ ಅವರನ್ನು ಗುರುತಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ~ ಎಂದು ಪ್ರತಿಪಾದಿಸಿದರು.

`ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ, ಸೌಲಭ್ಯಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಲು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪ್ರತಿಯೊಬ್ಬರಿಗೆ ನೀಡುವುದು ಅಗತ್ಯ. ಪಡಿತರ ಸೇರಿದಂತೆ ಇತರ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ. ಇದನ್ನು ತಪ್ಪಿಸಲು ಆಧಾರ್ ಸಹಕಾರಿಯಾಗಲಿದೆ~ ಎಂದು ತಿಳಿಸಿದರು.

ಯಾವುದೇ ಒಂದು ಯೋಜನೆಗೆ ಸಂಬಂಧಿಸಿದಂತೆ ಮಾತನಾಡುವುದು ಸುಲಭ. ಆದರೆ ಯೋಜನೆಯನ್ನು ಜಾರಿಗೆ ತರುವ ಮುನ್ನ ಸಾಕಷ್ಟು ಚರ್ಚೆ ಮಾಡಲಾಗಿರುತ್ತದೆ. ಅದರ ಲೋಪ-ದೋಷಗಳ ಬಗ್ಗೆಯೂ ಚರ್ಚೆ ಮಾಡಲಾಗಿರುತ್ತದೆ. ಅದರಂತೆ ಈ ಯೋಜನೆಯಡಿ ಸಂಗ್ರಹಿಸಿದ ವೈಯಕ್ತಿಕ ವಿವರ ಯಾರಿಗೂ ಸಿಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ. ಇದರಲ್ಲಿ ಸಂದೇಹ ಬೇಡ ಎಂದರು.

ಈಗಾಗಲೇ ದೇಶದಲ್ಲಿ ಏಳು ಕೋಟಿ ಜನರು ಆಧಾರ್ ಸಂಖ್ಯೆ ಪಡೆಯಲು ನೋಂದಣಿ ಮಾಡಿಸಿದ್ದಾರೆ. 3.23 ಕೋಟಿ ನಾಗರಿಕರಿಗೆ ಸಂಖ್ಯೆ ನೀಡಲಾಗಿದೆ ಎಂದರು. ಇ- ಆಡಳಿತ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ.ಪ್ರಭಾಕರ್, ಸಿವಿಕ್ ಕಾರ್ಯಕರ್ತ ಮ್ಯಾಥ್ಯೂ ಥಾಮಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.