ADVERTISEMENT

ಆನೆ ದಂತ ಮಾರಾಟ: ಸೆರೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 19:10 IST
Last Updated 26 ಫೆಬ್ರುವರಿ 2011, 19:10 IST

ಬೆಂಗಳೂರು: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ಮಹದೇವಪುರ ಠಾಣೆಯ ಪೊಲೀಸರು ಎಂಟು ಲಕ್ಷ ರೂಪಾಯಿ ಮೌಲ್ಯದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.ತಮಿಳುನಾಡಿನ ಡೆಂಕಣಿಕೋಟೆಯ ರಾಜಾ (30), ಮಲ್ಲೇಶ (26) ಮತ್ತು ಮಾದಪ್ಪ (45) ಬಂಧಿತರು.

ಆರೋಪಿಗಳು ಡೆಂಕಣಿಕೋಟೆಯ ಗಂಜುಗುಳಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಆನೆಗಳಿಂದ ದಂತಗಳನ್ನು ಕಳವು ಮಾಡಿ ತಂದು ಕೆ.ಆರ್.ಪುರ ರೈಲು ನಿಲ್ದಾಣ ಸಮೀಪದ ಹೋಟೆಲ್‌ವೊಂದರ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅವರೆಲ್ಲರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವನ್ಯಜೀವಿ ಸಾಕಣೆ: ಬಂಧನ
ವನ್ಯಜೀವಿಗಳನ್ನು ಮನೆಯಲ್ಲಿ ಸಾಕಣೆ ಮಾಡುತ್ತಿದ್ದ ಆರೋಪದ ಮೇಲೆ ದೇವು (30) ಎಂಬಾತನನ್ನು ಬಂಧಿಸಿರುವ ಸಿಐಡಿ ಅರಣ್ಯ ಘಟಕದ ಪೊಲೀಸರು ಗಿಣಿ ಮತ್ತು ಕೋತಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಪುರದ ಉದಯನಗರ ನಿವಾಸಿಯಾದ ದೇವು ಕೇರಳದಿಂದ ಪ್ರಾಣಿ ಮತ್ತು ಪಕ್ಷಿಗಳನ್ನು ಖರೀದಿಸಿ ತಂದು ಮನೆಯಲ್ಲಿ ಸಾಕುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ಆತನ ಮನೆಯ ಮೇಲೆ ದಾಳಿ ನಡೆಸಿ ಐದು ಗಿಣಿ, ಒಂದು ಮೈನಾ ಹಕ್ಕಿ ಮತ್ತು ಎರಡು ಕೋತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವು ವಿರುದ್ಧ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನಾಭರಣ ಸುಲಿಗೆ
ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯಿಂದ ಚಿನ್ನಾಭರಣ, ಮೊಬೈಲ್ ಮತ್ತು ನಗದು ಸೇರಿದಂತೆ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಿತ್ತುಕೊಂಡು ಹೋದ ಘಟನೆ ಬನಶಂಕರಿ ಎರಡನೇ ಹಂತದ ಸೇವಾಕ್ಷೇತ್ರ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಈ ಬಗ್ಗೆ ಕುಮಾರಸ್ವಾಮಿಲೇಔಟ್ ನಿವಾಸಿ ದೆಹಲಿ ಮೂಲದ ಸುಭೀಷ್ಣಾ ಎಂಬುವರು ದೂರು ಕೊಟ್ಟಿದ್ದಾರೆ. ಅವರು ಸ್ನೇಹಿತೆ ಖುಷ್ಬೂ ಜತೆ ಜಯನಗರಕ್ಕೆ ಹೋಗಿ ಆಟೊದಲ್ಲಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೊವನ್ನು ಹಿಂಬಾಲಿಸಿ ಬಂದ ಕಿಡಿಗೇಡಿಗಳು ಸುಭೀಷ್ಣಾ ಅವರ ಬಳಿಯಿದ್ದ ಹಣ, ಚಿನ್ನದ ಉಂಗುರ, ಮೊಬೈಲ್ ಫೋನ್‌ಗಳಿದ್ದ ಕೈಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.