ADVERTISEMENT

ಆನ್‌ಲೈನ್ ಕೌನ್ಸೆಲಿಂಗ್ ಸೀಟು ಬ್ಲಾಕಿಂಗ್‌ಗೆ ತಡೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:45 IST
Last Updated 21 ಜನವರಿ 2012, 19:45 IST

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಒಳಗೊಂಡಂತೆ ವೃತ್ತಿಶಿಕ್ಷಣ ಪದವಿ ಕೋರ್ಸ್‌ಗಳಿಗೆ ಈ ಬಾರಿ ಆನ್‌ಲೈನ್ ಕೌನ್ಸೆಲಿಂಗ್ ನಡೆಸುವ ಮೂಲಕ `ಸೀಟು ಬ್ಲಾಕಿಂಗ್~ನಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರತಿಯೊಂದು ಕಾಲೇಜು ಮತ್ತು ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳು ಎಷ್ಟು ಎಂಬ ಮಾಹಿತಿ ಕೌನ್ಸೆಲಿಂಗ್ ಪ್ರಕ್ರಿಯೆಯ ಆರಂಭದಲ್ಲೇ ವೆಬ್‌ಸೈಟ್‌ನಲ್ಲಿ ದೊರೆಯಲಿದೆ. ಸಿಇಟಿ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ತನ್ನಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ನೀಡಲು ವಿಫಲವಾಗುವ ಕಾಲೇಜುಗಳನ್ನು ಸೀಟು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗುತ್ತದೆ. ಈ ಸೀಟುಗಳನ್ನು ಕಾಲೇಜುಗಳು ಮ್ಯಾನೇಜ್‌ಮೆಂಟ್ ಕೋಟಾಗೆ ಸೇರಿಸಲೂ ಸಾಧ್ಯವಿಲ್ಲ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ತಮ್ಮಲ್ಲಿ ಲಭ್ಯ ಇರುವ ಸೀಟುಗಳು ಎಷ್ಟು ಎಂಬುದನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಈ ವ್ಯವಸ್ಥೆಯಲ್ಲಿ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಎಂಜಿನಿಯರಿಂಗ್ ಕಾಲೇಜುಗಳಿಗೆ ನಿಯಮಾವಳಿಯಲ್ಲಿ ವಿನಾಯಿತಿ ತೋರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎಐಇಇಇ) ಬರೆದ ವಿದ್ಯಾರ್ಥಿಗಳಿಗೆ ಇರುವ ಕೌನ್ಸೆಲಿಂಗ್ ಮಾದರಿಯನ್ನೇ ಇಲ್ಲಿಯೂ ಅನುಸರಿಸಲಾಗುವುದು.

ಎಐಇಇಇ ಬಳಸುತ್ತಿರುವ ಸಾಫ್ಟ್‌ವೇರನ್ನೇ ಪ್ರಾಧಿಕಾರ ಬಳಸಲಿದೆ. ಪ್ರಾಧಿಕಾರದ ಈಗಿನ ವೆಬ್‌ಸೈಟ್ ಮೂಲಕವೇ ಆನ್‌ಲೈನ್ ಕೌನ್ಸೆಲಿಂಗ್ ನಡೆಸುವ ಸಾಧ್ಯತೆ ಅಧಿಕವಾಗಿದೆ. ಕೌನ್ಸೆಲಿಂಗ್ ನಡೆಯುವ ಸಮಯದಲ್ಲಿ ವೆಬ್‌ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ, ಇದನ್ನು ನಿರ್ವಹಿಸಲು ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಕೇಂದ್ರ ಶಕ್ತವಾಗಿದೆ ಎಂದು ಪ್ರಾಧಿಕಾರದ ಉನ್ನತ ಮೂಲಗಳು ತಿಳಿಸಿವೆ.

ಕೌನ್ಸೆಲಿಂಗ್ ಪ್ರಕ್ರಿಯೆ ಸರಾಗವಾಗಿ ನಡೆಯಲು, ಸಾಮಾನ್ಯ ಪ್ರವೇಶ ಪರೀಕ್ಷೆಯ ನಂತರ ಪ್ರಾಧಿಕಾರವು ಕೆಲವು ದಿನಗಳ ಕಾಲ ಪರೀಕ್ಷಾರ್ಥ ಆನ್‌ಲೈನ್ ಕೌನ್ಸೆಲಿಂಗ್ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.