ಬೆಂಗಳೂರು: ‘ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಕ್ಯಾಂಪಸ್ ಅನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದ್ದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ವಿಶ್ವವಿದ್ಯಾಲಯ ಸ್ಥಳಾಂತರ ತಡೆ ಕೋರಿ ರಾಜ್ಯದ ಆಯುರ್ವೇದ, ನರ್ಸಿಂಗ್, ದಂತವೈದ್ಯ, ಫಾರ್ಮಸಿ ಹಾಗೂ ಅರೆ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ತಿರಸ್ಕರಿಸಿದೆ.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, ‘ಅರ್ಜಿದಾರರು ಸರ್ಕಾರದ ಆದೇಶದಿಂದ ಬಾಧಿತರಾದವರಲ್ಲ. ಈ ಅರ್ಜಿ ಸಲ್ಲಿಕೆ ಹಿಂದೆ ದುರುದ್ದೇಶ ಅಡಗಿದೆ. ಆದ್ದರಿಂದ ಮನವಿ ಮಾನ್ಯ ಮಾಡಬಾರದು’ ಎಂಬ ಕೋರಿಕೆಯನ್ನು ಪೀಠ ಮಾನ್ಯ ಮಾಡಿತು.
ರುದ್ರೇಶ್ ಕೊಲೆ: ಎನ್‌ಐಎ ತನಿಖೆ ರದ್ದು
ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕದಸದಸ್ಯ ಪೀಠ ಮಂಗಳವಾರ ಪ್ರಕಟಿಸಿದ್ದು, ‘ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರೇ ನಡೆಸಬೇಕು’ ಎಂದು ತಾಕೀತು ಮಾಡಿದೆ.
ಪ್ರಕರಣದ ಐದನೇ ಆರೋಪಿಯೂ ಆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಅಸೀಮ್ ಷರೀಫ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.
ಇದರಿಂದಾಗಿ ಆರೋಪಿಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಕೂಟ ಕಾಯ್ದೆ–1967ರ ಅಡಿಯಲ್ಲೇ ಪ್ರಕರಣದ ತನಿಖೆ ನಡೆಯಲಿದೆ.