ADVERTISEMENT

ಆರೋಪಿಗಳನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 20:15 IST
Last Updated 20 ಫೆಬ್ರುವರಿ 2012, 20:15 IST

ಬೆಂಗಳೂರು: ತಮಿಳುನಾಡು ಮೂಲದ ಅಪ್ಪುಸ್ವಾಮಿ (59) ಎಂಬ ವಕೀಲರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದ ಮಹಮ್ಮದ್ ಜುನೈದ್ (25), ಮಂಡ್ಯ ಜಿಲ್ಲೆಯ ಯಶವಂತ್ (22) ಮತ್ತು ನಾಗಮಂಗಲ ತಾಲ್ಲೂಕಿನ ಗಿರೀಶ್ (24) ಬಂಧಿತರು.

ಜುನೈದ್ ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪುಸ್ವಾಮಿ ಅವರು ಜುನೈದ್‌ನ ವಕೀಲರಾಗಿದ್ದರು.

ಪ್ರಕರಣದ ಬಗ್ಗೆ ಮಾತನಾಡುವ ಸೋಗಿನಲ್ಲಿ ಆತ ಅವರನ್ನು ಫೆಬ್ರುವರಿ 11ರಂದು ಮೈಸೂರಿಗೆ ಅಪ್ಪುಸ್ವಾಮಿ ಅವರನ್ನು ಕರೆಸಿಕೊಂಡಿದ್ದ.

ಕಾರಿನಲ್ಲಿ ಮೈಸೂರಿಗೆ ಬಂದಿದ್ದ ಅವರು ತಮಿಳುನಾಡಿಗೆ ವಾಪಸ್ ಹೋಗಿರಲಿಲ್ಲ. ಈ ಬಗ್ಗೆ ತಮಿಳುನಾಡಿನ ಕಣತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಅಪ್ಪುಸ್ವಾಮಿ ಅವರನ್ನು ಕಾರಿನಲ್ಲಿ ಮಂಡ್ಯ ಸಮೀಪಕ್ಕೆ ಎಳೆದೊಯ್ದು ಕೈ ಕಾಲು ಕಟ್ಟಿ ಹಾಕಿ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು.

ನಂತರ ಅವರ ಶವಕ್ಕೆ ಕಲ್ಲು ಕಟ್ಟಿ ನಾಲೆಯೊಂದಕ್ಕೆ ಎಸೆದು ಬಂದಿದ್ದರು. ಅಲ್ಲದೇ ಅವರ ಕಾರು ಮತ್ತು ಎಟಿಎಂ ಕಾರ್ಡ್ ತೆಗೆದುಕೊಂಡು ಪರಾರಿಯಾಗಿದ್ದರು.

ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಅವರ ಎಟಿಎಂ ಕಾರ್ಡ್ ಬಳಸಿ ಹೋಟೆಲ್‌ಗಳ ಬಿಲ್ ಪಾವತಿ ಮಾಡಿದ್ದರು ಮತ್ತು ಪೆಟ್ರೋಲ್ ಬಂಕ್‌ಗಳಿಗೂ ಹಣ ಪಾವತಿಸಿದ್ದರು.

ಈ ಬಗ್ಗೆ ಅಪ್ಪುಸ್ವಾಮಿ ಸಂಬಂಧಿಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಡಿಎಆರ್) ಕಾನ್‌ಸ್ಟೇಬಲ್ ಆಗಿದ್ದ ಗಿರೀಶ್‌ನನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿದ್ದರು.

ಯಶವಂತ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಮಂಡ್ಯ, ನಾಗಮಂಗಲ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ತಮಿಳುನಾಡು ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕಣತ್ತೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.