ಬೆಂಗಳೂರು: ಬಿಬಿಎಂಪಿ ಸದಸ್ಯ ದಿವಾನ್ ಅಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಶೇಖ್ ಮಹಮ್ಮದ್ ಅಜ್ಗರ್ ಅಲಿಯಾಸ್ ಮಾಹೀಂ (48) ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಎರಡು ಕೊಲೆ, ಕೊಲೆ ಯತ್ನ, ಅಪಹರಣ, ಹಲ್ಲೆ. ದರೋಡೆ ಮತ್ತು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವುದು ಸೇರಿದಂತೆ ಮಾಹೀಂ ವಿರುದ್ಧ ಒಟ್ಟು 17 ಅಪರಾಧ ಪ್ರಕರಣಗಳಿವೆ.
ಆತನ ಮೇಲೆ ಸಿದ್ದಾಪುರ, ತಿಲಕ್‌ನಗರ, ಜಯನಗರ, ಹಲಸೂರುಗೇಟ್, ಬನಶಂಕರಿ, ಕಲಾಸಿಪಾಳ್ಯ ಮತ್ತು ಕುಮಾರಸ್ವಾಮಿಲೇಔಟ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಅಲ್ಲದೇ ಸಿದ್ದಾಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದ ಆದೇಶದ ಪ್ರತಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಹೀಂಗೆ ತಲುಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಟೊ ಚಾಲಕನ ಕೊಲೆ
ಆಟೊ ಚಾಲಕರೊಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರಾಜಗೋಪಾಲನಗರ ಸಮೀಪದ ಲಕ್ಷ್ಮಿದೇವಿನಗರ ಮುಖ್ಯರಸ್ತೆಯಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.ಲಕ್ಷ್ಮಿದೇವಿನಗರದ ಬಳಿಯ ತ್ಯಾಗಿನಗರ ನಿವಾಸಿ ಬಿ.ಎಂ.ರಾಜಶೇಖರ್ (48) ಕೊಲೆಯಾದವರು. ಅವರು ರಾತ್ರಿ ವೇಳೆಯಲ್ಲಿ ಆಟೊ ಚಾಲನೆ ಮಾಡುತ್ತಿದ್ದರು. ಅಂತೆಯೇ ಅವರು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಆಟೊದಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ವೀಣಾ ಶಾಲೆಯ ಬಳಿ ಅವರ ಆಟೊವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹೊಟ್ಟೆ ಮತ್ತು ಬೆನ್ನಿಗೆ ಚಾಕುವಿನಿಂದ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿದ್ದಾರೆ. ಅವರ ಶವ ಶಾಲೆಯ ಬಳಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಠಾಣೆಗೆ ಬೆಳಿಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕೊಲೆಯಾಗಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಮತ್ತು ಕೊಲೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನ
ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಜಯನಗರದ ಮಹಮ್ಮದ್ ಮುದಾಸಿರ್ ನಜರ್ (24) ಮತ್ತು ಮಹಮ್ಮದ್ ಮೌಸಿನ್ ಅಖ್ತರ್ (22) ಬಂಧಿತರು. ಆರೋಪಿಗಳು ಮೈಸೂರು ರಸ್ತೆಯ ಸಿಟಿ ಮಾರುಕಟ್ಟೆ ವೃತ್ತದ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಅವರನ್ನು ಬಂಧಿಸಲಾಯಿತು. ಅವರ ಜತೆ ಇದ್ದ ಮತ್ತೊಬ್ಬ ಆರೋಪಿ ಎಸಾನ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 11 ಕೆ.ಜಿ ಗಾಂಜಾ, ಮೂರು ಮೊಬೈಲ್ ಫೋನ್‌ಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಒಡಿಶಾ ದಿಂದ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.