ADVERTISEMENT

ಇಂಗ್ಲಿಷ್ ಮಾಧ್ಯಮವೇ ಕಾರಣವಲ್ಲ: ಆಚಾರ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:35 IST
Last Updated 7 ಜನವರಿ 2012, 19:35 IST

ಬೆಂಗಳೂರು: ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಇಂಗ್ಲಿಷ್ ಮಾಧ್ಯಮದ ಹಾವಳಿ ಮಾತ್ರ ಕಾರಣವಲ್ಲ, ಕೆಲವು ಜಿಲ್ಲೆಗಳ ಜನಸಂಖ್ಯೆ ಬೆಳವಣಿಗೆ ದರದಲ್ಲಿ ಕಂಡುಬಂದಿರುವ ಕುಸಿತವೂ ಇದಕ್ಕೆ ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದರು.

ಆರು ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆ. ಪರಿಣಾಮವಾಗಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅವರು ವಿವರಿಸಿದರು.

ನಗರದಲ್ಲಿನ ಬಿಜೆಪಿ ಕಚೇರಿಯ `ಜಗನ್ನಾಥ ಭವನ~ದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ `ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಘಟಕ~ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹತ್ತು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳ ಸಂಖ್ಯೆ 1.43 ಲಕ್ಷ ಇತ್ತು. ಈಗ ಅದು 1.05 ಲಕ್ಷಕ್ಕೆ ಕುಸಿದಿದೆ. ಅಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇದೂ ಒಂದು ಕಾರಣ~ ಎಂದು ಹೇಳಿದರು.

ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಘಟಕದ ರಾಜ್ಯ ಸಂಚಾಲಕ ಎಂ. ನೀಲಯ್ಯ ಮಾತನಾಡಿ, `ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಬೋಧಕ ವರ್ಗ ಈ ಘಟಕದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು~ ಎಂದರು. ಘಟಕದ ರಾಜ್ಯ ಸಹಸಂಚಾಲಕ ಸೂಗೂರು ತಿಪ್ಪೇಸ್ವಾಮಿ, ಬೆಂಗಳೂರು ಮಹಾನಗರ ಸಂಚಾಲಕ ಪಿ. ಪಳನಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.