ADVERTISEMENT

ಇಂದಿನಿಂದ ಏರೊ ಇಂಡಿಯಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 19:50 IST
Last Updated 8 ಫೆಬ್ರುವರಿ 2011, 19:50 IST
ಇಂದಿನಿಂದ ಏರೊ ಇಂಡಿಯಾ ಪ್ರದರ್ಶನ
ಇಂದಿನಿಂದ ಏರೊ ಇಂಡಿಯಾ ಪ್ರದರ್ಶನ   

ಬೆಂಗಳೂರು: ವೈಮಾಂತರಿಕ್ಷ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಐದು ದಿನಗಳ ಕಾಲ ನಡೆಯುವ ‘ಏರೊ ಇಂಡಿಯಾ’ ಪ್ರದರ್ಶನಕ್ಕೆ ನಗರದ ಯಲಹಂಕ ವಾಯುನೆಲೆ ಸಂಪೂರ್ಣವಾಗಿ ಸಜ್ಜುಗೊಂಡಿದ್ದು, ಯುದ್ಧ ವಿಮಾನಗಳಲ್ಲದೇ, ನಾಗರಿಕ ಉಪಯೋಗಕ್ಕಾಗಿ ಬಳಸುವ ವಿಮಾನಗಳ ಪ್ರದರ್ಶನ ಮತ್ತು ಅವುಗಳ ಕಸರತ್ತು ನಡೆಯಲಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಮೇಳಕ್ಕೆ ಬುಧವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಚಾಲನೆ ನೀಡಲಿದ್ದಾರೆ. ಪ್ರದರ್ಶನದಲ್ಲಿ ನಡೆಯುವ ಲೋಹದ ಹಕ್ಕಿಗಳ ನರ್ತನ ನೋಡಲು ಸಾಮಾನ್ಯ ಜನರು ಕಾತರರಾಗಿದ್ದರೆ, ಕೋಟ್ಯಂತರ ರೂಪಾಯಿ ವ್ಯವಹಾರ ಕುದುರಿಸಲು ಕಂಪೆನಿಗಳು ಯೋಜನೆ ಹಾಕಿಕೊಂಡಿವೆ.

ರಕ್ಷಣಾ ಸಚಿವಾಲಯ ಹಾಗೂ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಜೊತೆಗೂಡಿ ಮೇಳವನ್ನು ಆಯೋಜಿಸಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್, ಇಸ್ರೇಲ್, ಜಪಾನ್, ಬಾಂಗ್ಲಾದೇಶ, ಶ್ರೀಲಂಕಾ, ಬೆಲ್ಜಿಯಂ, ಇಟಲಿ, ಸೇರಿದಂತೆ ಸುಮಾರು 60 ದೇಶಗಳ 400 ಕಂಪೆನಿಗಳು ಭಾಗವಹಿಸುತ್ತಿವೆ. ಸುಮಾರು 75,000 ಪ್ರತಿನಿಧಿಗಳು ಆಗಮಿಸಿದ್ದಾರೆ. ಇದೇ ಮೊದಲ ಬಾರಿ ಚೀನಾ ಸಹ ಭಾಗವಹಿಸುತ್ತಿದೆ. ಸ್ಥಳೀಯ ಹಾಗೂ ವಿದೇಶಿ ಕಂಪೆನಿಗಳ ಸುಮಾರು 675 ಮಳಿಗೆಗಳು ಸ್ಥಾಪನೆಯಾಗಿವೆ.

‘ಮೊದಲ ಮೂರು ದಿನಗಳು (ಫೆ 9ರಿಂದ 11) ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಟುವಟಿಕೆಗಳು ನಡೆಯುವ ಕಾರಣ ವಿಮಾನಗಳ ಕಸರತ್ತು ಕಡಿಮೆ ಇರುತ್ತದೆ. ಕೊನೆಯ ಎರಡು ದಿನಗಳು (ಫೆ 12 ಹಾಗೂ 13) ಬಹುತೇಕ ಎಲ್ಲ ವಿಮಾನಗಳು ತಮ್ಮ ಕೌಶಲ್ಯವನ್ನು ಮೆರೆಯಲಿವೆ. ವಿಮಾನಗಳ ಕಸರತ್ತನ್ನು ನೋಡಲು ಬಯಸುವ ಸಾರ್ವಜನಿಕರು ಕೊನೆಯ ದಿನಗಳಲ್ಲಿ ಬರುವುದು ಒಳಿತು. ಎರಡು ಲಕ್ಷ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ರಕ್ಷಣಾ ಪ್ರದರ್ಶನ ಸಂಘಟನೆಯ ಜಂಟಿ ನಿರ್ದೇಶಕರಾದ ವಿಂಗ್ ಕಮಾಂಡರ್ ಎಂ.ಡಿ. ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸುರಕ್ಷತೆ: ವಾಯುನೆಲೆಯ ಸುತ್ತಲೂ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಇದಲ್ಲದೇ ಗಡಿಭದ್ರತಾ ಪಡೆಯ ಯೋಧರು ಸಹ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಭದ್ರತಾ ದೃಷ್ಟಿಯಿಂದ ವಾಯುನೆಲೆಯ ಸುತ್ತ ಸಾರ್ವಜನಿಕರು ಅನಾವಶ್ಯಕವಾಗಿ ಸಂಚರಿಸಬಾರದು ಹಾಗೂ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ನಿಲ್ಲದಂತೆ ಎಚ್ಚರ ವಹಿಸದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಬಸ್ ವ್ಯವಸ್ಥೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ನಗರದ ವಿವಿಧ ಪ್ರದೇಶಗಳಿಂದ ನೇರವಾಗಿ ಯಲಹಂಕ ವಾಯುನೆಲೆಗೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಿಂದ  ಸುಮಾರು 200 ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿದೆ.

ಸಿದ್ಧತೆ ಪೂರ್ಣ: ವೈಮಾನಿಕ ಪ್ರದರ್ಶನದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ವಿದೇಶಿ ಕಂಪೆನಿಗಳ ಬಹುತೇಕ ಎಲ್ಲ ವಿಮಾನಗಳು ಬಂದಿಳಿವೆ. ಇದಲ್ಲದೇ, ಒಂದು ಸುತ್ತು ಅಭ್ಯಾಸವನ್ನೂ ಪೂರ್ಣಗೊಳಿಸಿವೆ. 

ಬುಧವಾರದಿಂದ ಪ್ರದರ್ಶನ ನೀಡಲು ಅವು ಸಂಪೂರ್ಣವಾಗಿ ಸಿದ್ಧವಾಗಿವೆ’ ಎಂದು ವಾಯುನೆಲೆಯಲ್ಲಿ ಕಾರ್ಯನಿರತರಾದ ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.
ದೇಶೀಯ ಕಂಪೆನಿಗಳು: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ನ್ಯಾಷನಲ್ ಏರೊನಾಟಿಕ್ಸ್ ಲಿಮಿಟೆಡ್ (ಎನ್‌ಎಎಲ್), ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್), ಬೆಲ್ ಹೆಲಿಕಾಪ್ಟರ್ ಭಾಗವಹಿಸುತ್ತಿವೆ. ಇದಲ್ಲದೇ, ಖಾಸಗಿ ಕಂಪೆನಿಗಳಾದ ಮಹೀಂದ್ರಾ ಅಂಡ್ ಮಹೀಂದ್ರಾ, ಗೋದ್ರೇಜ್, ಕ್ವೆಸ್ಟ್ ಸಹ ಭಾಗವಹಿಸುತ್ತಿವೆ.

ವಿಶೇಷತೆಗಳು: ಎಚ್‌ಎಎಲ್ ನಿರ್ಮಿಸಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್) ಮೊದಲ ಬಾರಿಗೆ ಹಾರಾಟ ನಡೆಸಲಿದೆ. ಇದರ ಜೊತೆ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಹಾಗೂ ತೇಜಸ್ ಯುದ್ಧವಿಮಾನವು ಕಸರತ್ತು ಪ್ರದರ್ಶಿಸಲಿದೆ.

ವಿದೇಶಿ ಕಂಪೆನಿಗಳು: ಅಮೆರಿಕದ ಬೋಯಿಂಗ್ ಕಂಪೆನಿಯ ಎಫ್/ಎ-18 ಸೂಪರ್ ಹಾರ್ನೆಟ್ ಹಾಗೂ ಲಾಕ್‌ಹೇಡ್ ಮಾರ್ಟಿನ್ ಕಂಪೆನಿಯ ಎಫ್-16 ಸೂಪರ್ ವೈಪರ್, ರಷ್ಯಾದ ಮಿಗ್ ಕಂಪೆನಿಯ ಮಿಗ್-35, ಫ್ರಾನ್ಸ್‌ನ ಡಸಾಲ್ಟ್ ರಫೆಲ್, ಯೂರೋಪ್‌ನ ಯೂರೋಫೈಟರ್ ಟೈಫೂನ್ ಹಾಗೂ ಸ್ವೀಡನ್‌ನ ಎಸ್‌ಎಎಬಿ ಗ್ರಿಪ್ಪನ್ ಯುದ್ಧ ವಿಮಾನಗಳು ಪ್ರಮುಖ ಆಕರ್ಷಣೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.