ADVERTISEMENT

ಇಂದು ಅಂತಿಮ ಪರೀಕ್ಷಾರ್ಥ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಬೆಂಗಳೂರು: ಲಖನೌನ ರೈಲ್ವೆ ವಿನ್ಯಾಸ ಮತ್ತು ಗುಣಮಟ್ಟ ಮಾಪಕ ಸಂಸ್ಥೆ (ಆರ್‌ಡಿಎಸ್‌ಒ) ಅಧಿಕಾರಿಗಳು ನಗರದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಬುಧವಾರ ಮೆಟ್ರೊ ರೈಲಿನ ಅಂತಿಮ ಹಂತದ ಪರೀಕ್ಷಾರ್ಥಸಂಚಾರ ಆರಂಭಿಸಲಿದ್ದಾರೆ. 

ಮೂಲಗಳ ಪ್ರಕಾರ ಬಿಎಂಆರ್‌ಸಿಎಲ್‌ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸಹ ಪರೀಕ್ಷಾರ್ಥ ಸಂಚಾರದಲ್ಲಿ ಭಾಗವಹಿಸಲಿದ್ದಾರೆ.

ಭಾನುವಾರ ನಗರಕ್ಕೆ ಬಂದಿಳಿದ ಆರ್‌ಡಿಎಸ್‌ಒ ಅಧಿಕಾರಿಗಳು ತಮ್ಮಡನೆ ಹಳಿ ವಿನ್ಯಾಸ, ರೈಲಿನ ವೇಗ ಮತ್ತಿತರ ಪರೀಕ್ಷೆಗಳನ್ನು ನಡೆಸುವ `ಟ್ರ್ಯಾಕ್ ರೆಕಾರ್ಡಿಂಗ್ ಕಾರ್~ ಉಪಕರಣವನ್ನು ತಂದಿದ್ದಾರೆ.

ಸೋಮವಾರ ರೈಲಿನಲ್ಲಿ ಸಂಚರಿಸಿದ ಸಂಸ್ಥೆಯ ಅಧಿಕಾರಿಗಳ ತಂಡವೊಂದು ಪರೀಕ್ಷೆಗೆ ಅಗತ್ಯವಾದ ಅಂಶಗಳನ್ನು ಪರಿಶೀಲಿಸಿದರು. ಉಳಿದ ಅಧಿಕಾರಿಗಳು ಮೆಟ್ರೊ ರೈಲಿನ ಬೋಗಿಗಳನ್ನು ಜೋಡಿಸುವ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪರೀಕ್ಷಾರ್ಥ ಸಂಚಾರ ಹಾಗೂ ತುರ್ತು ತಡೆ ಅಂತರ ಪರೀಕ್ಷೆಗೆ ಪೂರಕವಾದ ಅಂಶಗಳನ್ನು ಪರಾಮರ್ಶಿಸಿದರು.

`ಭಾರಿ ತಾಂತ್ರಿಕ ಅಡಚಣೆಗಳು ಪತ್ತೆಯಾಗದಿದ್ದರೆ ಕೇವಲ 10 ದಿನಗಳೊಳಗಾಗಿ ಅಂತಿಮ ಹಂತದ ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲಿದೆ. ನಂತರ ರೈಲ್ವೆ ಸುರಕ್ಷತಾ ಆಯೋಗ (ಸಿಆರ್‌ಎಸ್) ಪರೀಕ್ಷೆ ನಡೆಸಲಿದೆ~ ಎಂದು ಆರ್‌ಡಿಎಸ್‌ಒ ಅಧಿಕಾರಿಗಳು ತಿಳಿಸಿದರು.

ರೈಲ್ವೆ ಸುರಕ್ಷತಾ ಆಯೋಗದ ಪರೀಕ್ಷೆ ಬಳಿಕವೂ ಬಿಎಂಆರ್‌ಸಿಎಲ್‌ನಿಂದ 2500 ಕಿ.ಮೀನಷ್ಟು ಪರೀಕ್ಷಾರ್ಥ ಸಂಚಾರ ಮುಂದುವರಿಯಲಿದೆ. ನಂತರವಷ್ಟೇ ಪ್ರಯಾಣಿಕರಿಗೆ `ನಮ್ಮ ಮೆಟ್ರೊ~ ರೈಲು ಲಭ್ಯವಾಗಲಿದೆ. ಆರ್‌ಡಿಎಸ್‌ಒ ಅಧಿಕಾರಿಗಳು ಹಳಿ ವ್ಯವಸ್ಥೆಯ ಕುರಿತು ಮಾಹಿತಿಯನ್ನು (ಡೇಟಾಬೇಸ್) ಸಮಗ್ರವಾಗಿ ಸಂಗ್ರಹಿಸಲಿದ್ದಾರೆ. ಅಲ್ಲದೇ ವೇಗಮಿತಿಯನ್ನು ನಿರ್ಧರಿಸಲಿದ್ದಾರೆ.

`ಶೀಘ್ರವೇ ಅಂತಿಮ ಹಂತದ ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲಿದ್ದು ನಂತರ ಸಿಆರ್‌ಎಸ್‌ನವರಿಂದ ಪರೀಕ್ಷಾ ಕಾರ್ಯ ನಡೆಯಲಿದೆ. ಬೈಯಪ್ಪನಹಳ್ಳಿ -ಎಂ.ಜಿ. ರಸ್ತೆಯ ರೈಲು ನಿಲ್ದಾಣದಲ್ಲಿ ಯಾವಾಗ ಸಾರ್ವಜನಿಕ ಸಂಚಾರ ಆರಂಭವಾಗುತ್ತದೆ ಎಂಬುದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ~ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.