ADVERTISEMENT

ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಬೆಂಗಳೂರು: ಸಾಲ ತೀರಿಸಲು ಸಾಧ್ಯವಾಗದೆ ಒಂದೇ ಕುಟುಂಬದ ಏಳು ಮಂದಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ರಾಮಮೂರ್ತಿನಗರ ಸಮೀಪದ ಸುಬ್ರಮಣಿ ಲೇಔಟ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಸುಬ್ರಮಣಿ ಲೇಔಟ್ ಒಂದನೇ ಮುಖ್ಯರಸ್ತೆ ನಿವಾಸಿ ಮುನಿರೆಡ್ಡಿ (34), ಅವರ ಪತ್ನಿ ಕವಿತಾ (28), ಮಕ್ಕಳಾದ ರುಚಿಕಾ (7) ಮತ್ತು ಅಂಕಿತಾ (2), ತಂದೆ ರಾಯಣ್ಣ ರೆಡ್ಡಿ (67), ತಾಯಿ ವೆಂಕಟಮ್ಮ (57) ಹಾಗೂ ಅಜ್ಜಿ ಮುನಿಯಮ್ಮ (78) ಆತ್ಮಹತ್ಯೆಗೆ ಯತ್ನಿಸಿದವರು.

ನಗರದ ತುಮಕೂರು ರಸ್ತೆಯಲ್ಲಿರುವ ಸರಕು ಸಾಗಣೆ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿರುವ ಮುನಿರೆಡ್ಡಿ ಅವರು ಸ್ನೇಹಿತರ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೇ ಫೈನಾನ್ಸ್ ಕಂಪೆನಿಗಳು ಮತ್ತು ಬ್ಯಾಂಕ್‌ಗಳಿಂದಲೂ ಸಾಲ ಪಡೆದಿದ್ದರು.

ಸಾಲ ತೀರಿಸಲಾಗದೆ ಹಾಗೂ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಮನನೊಂದಿದ್ದ ಅವರು ಆ ಬಗ್ಗೆ ಕುಟುಂಬ ಸದಸ್ಯರ ಬಳಿ ಅಳಲು ತೋಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ತಿಂಗಳುಗಳಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಮುನಿರೆಡ್ಡಿ ಮತ್ತು ಕುಟುಂಬ ಸದಸ್ಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅಂತೆಯೇ ಮುನಿರೆಡ್ಡಿ ಅವರು ಅಂಗಡಿಯಿಂದ ಸಂಜೆ ವಿಷ ತೆಗೆದುಕೊಂಡು ಬಂದು ಅದನ್ನು ತಂಪು ಪಾನೀಯದಲ್ಲಿ ಬೆರೆಸಿ ಕುಟುಂಬ ಸದಸ್ಯರೊಂದಿಗೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.

ರಾತ್ರಿ ಎಂಟು ಗಂಟೆ ಸುಮಾರಿಗೆ ಅವರ ಮನೆಗೆ ಬಂದ ಸಂಬಂಧಿಕರೊಬ್ಬರು, ವಿಷ ಕುಡಿದು ಅಸ್ವಸ್ಥರಾಗಿದ್ದ ಅವರೆಲ್ಲರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ಸಾಲ ತೀರಿಸಲಾಗದೆ ಮನನೊಂದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಸಾಲ ನೀಡಿದ ಸ್ನೇಹಿತರಿಗೆ ಧನ್ಯವಾದಗಳು~ ಎಂದು ಮುನಿರೆಡ್ಡಿ ಅವರು ಆತ್ಮಹತ್ಯೆಗೆ ಯತ್ನಿಸುವುದಕ್ಕೂ ಮುನ್ನ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತ: ಸಾವು
ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಕ್ಕೂರು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಸೆಕ್ಯುರಿಟಿ ಗಾರ್ಡ್ ಎಂ.ಆರ್.ಕುಮಾರ್ (62) ಮೃತಪಟ್ಟವರು. ಜಕ್ಕೂರು ನಿವಾಸಿಯಾದ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಜಕ್ಕೂರು ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುಮಾರ್ ಅವರಿಗೆ ಟೆಂಪೊ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಟೆಂಪೊ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.