ADVERTISEMENT

ಇತರ ಪಕ್ಷಗಳ ಅತೃಪ್ತರ ಮೇಲೆ ಜೆಡಿಎಸ್‌ ಕಣ್ಣು

ಕಾದು ನೋಡುವ ತಂತ್ರ: ಎರಡನೇ ಪಟ್ಟಿ ತಡ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 20:00 IST
Last Updated 13 ಮಾರ್ಚ್ 2014, 20:00 IST

ಬೆಂಗಳೂರು: ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಅತೃಪ್ತರನ್ನು ಸೆಳೆಯಲು ಜೆಡಿಎಸ್‌ ಮುಂದಾಗಿದೆ. ಇದೇ ಕಾರಣಕ್ಕೆ ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗಿದೆ.

ಕಾಂಗ್ರೆಸ್, ಬಿಜೆಪಿ ಪಟ್ಟಿ ಬಿಡುಗಡೆ  ಆದ ನಂತರ ಅಲ್ಲಿ ಟಿಕೆಟ್‌ ಸಿಗದವರು ಜೆಡಿಎಸ್‌ ಸೇರುವ ಸಾಧ್ಯತೆ ಇದೆ. ಹೀಗಾಗಿ ಜೆಡಿಎಸ್‌ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಟಿಕೆಟ್‌ನಿಂದ ವಂಚಿತರಾ­ಗಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಿವರಾಮಗೌಡ, ಕಾಂಗ್ರೆಸ್‌ ಟಿಕೆಟ್‌ನಿಂದ ವಂಚಿತರಾ­ಗಿರುವ ಸಿ.ಕೆ.ಜಾಫರ್ ಷರೀಫ್‌, ಮಹಿಮ ಪಟೇಲ್‌ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ದೂರ­ವಾಣಿ ಮೂಲಕ ಈಗಾಗಲೇ ಷರೀಫ್‌ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಷರೀಫ್ ಅವರನ್ನು ಪಕ್ಷಕ್ಕೆ ಕರೆತಂದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ದೇವೇಗೌಡ ಉತ್ಸುಕರಾಗಿ­ದ್ದಾರೆ. ಒಕ್ಕಲಿಗ, ಮುಸಲ್ಮಾನ ಸಮುದಾಯದ ಮತಗಳನ್ನು ಗಮನ­ದಲ್ಲಿಟ್ಟುಕೊಂಡು ಈ ರೀತಿಯ ಲೆಕ್ಕಾ­ಚಾರ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಶನಿವಾರ ಅಥವಾ ಭಾನುವಾರ ಜೆಡಿಎಸ್‌ ಸಂಸದೀಯ ಮಂಡಳಿ ಸಭೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.