ADVERTISEMENT

ಇದೇ 15ರಂದು ಪ್ರದಾನ: 58 ಯೋಧರಿಗೆ ಸೇವಾ ಪದಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬೆಂಗಳೂರು: ವಿಶಿಷ್ಟ ಸೇವೆ ಮತ್ತು ಶೌರ್ಯ ಪ್ರದರ್ಶಿಸಿದ ಭಾರತೀಯ ಸೇನೆಯ `ಸದರ್ನ್ ಕಮಾಂಡ್~ನ 58 ಮಂದಿ ಯೋಧರಿಗೆ ಸೇನಾ ದಿನವಾದ ಇದೇ 15ರಂದು ಪದಕ ಪ್ರದಾನ ಮಾಡಲಾಗುವುದು ಎಂದು ಮೇಜರ್ ಜನರಲ್ ಎ.ಕೆ. ಪ್ರಧಾನ್ ತಿಳಿಸಿದರು.

ಸೇನೆಯ ವಿವಿಧ ಕಾರ್ಯಾಚರಣೆಗಳಲ್ಲಿ ಶೌರ್ಯ ಮೆರೆದ 32 ಮಂದಿ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ 26 ಮಂದಿ ಯೋಧರಿಗೆ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು ಪದಕ ಪ್ರದಾನ ಮಾಡಲಿದ್ದಾರೆ ಎಂದು ಪ್ರಧಾನ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಭಾರತೀಯ ಸೇನೆಯ ಮಹಾ ದಂಡನಾಯಕರಾಗಿ ಸರ್ ಫ್ರಾನ್ಸಿಸ್ ಬುಚರ್ ಅವರಿಂದ 1949ರ ಜನವರಿ 15ರಂದು ಅಧಿಕಾರ ವಹಿಸಿಕೊಂಡ ದಿನವನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸದರ್ನ್ ಕಮಾಂಡ್‌ನ ಪದಕ ಪ್ರದಾನ ಕಾರ್ಯಕ್ರಮ 2003ರ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಇದೇ ಮೊದಲು.

15ರಂದು ನಡೆಯುವ ಕಾರ್ಯಕ್ರಮದಲ್ಲಿ ಒಂದು ಯುದ್ಧ ಸೇವಾ ಪದಕ, ಅಪ್ರತಿಮ ಶೌರ್ಯಕ್ಕಾಗಿ 31 ಸೇನಾ ಪದಕ, ಗಮನಾರ್ಹ ಸೇವೆಗಾಗಿ ಐದು ಸೇನಾ ಪದಕ, 21 ವಿಶಿಷ್ಟ ಸೇನಾ ಪದಕಗಳನ್ನು ನೀಡಲಾಗುವುದು. 31 ಸೇನಾ ಪದಕಗಳ ಪೈಕಿ ಐದು ಪದಕಗಳನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. 58 ಮಂದಿ ಯೋಧರ ಪೈಕಿ ಒಂಬತ್ತು ಮಂದಿ ಕರ್ನಾಟಕದವರು ಎಂದು ಅವರು ಮಾಹಿತಿ ನೀಡಿದರು.

ಮರಣೋತ್ತರ ಸೇನಾ ಪದಕ: ಮೇಜರ್ ಅತುಲ್ ಗರ್ಜೆ, ಮೇಜರ್ ಭಾನುಚಂದರ್, ಪನ್ನೀರ್ ಸೆಲ್ವಂ ರಾಜೇಂದ್ರನ್, ನಾಗಲಿಂಗಂ ಪಂಚವರ್ಣಂ, ರಾಕೇಶ್‌ಕುಮಾರ್ ಗುಪ್ತ ಅವರಿಗೆ ಮರಣೋತ್ತರ ಸೇನಾ ಪದಕ ನೀಡಲಾಗುವುದು ಎಂದು ಪ್ರಧಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.