ADVERTISEMENT

ಇನ್ಫೊಸಿಸ್‌ಗೆ ಸಲೀಲ್‌ ಸಿಇಒ

ಎರಡನೇ ಬಾರಿಗೆ ಸಂಸ್ಥೆಯ ಸಹ ಸ್ಥಾಪಕರಲ್ಲದ ವ್ಯಕ್ತಿಗೆ ಅಧಿಕಾರ

ಪಿಟಿಐ
Published 2 ಡಿಸೆಂಬರ್ 2017, 19:46 IST
Last Updated 2 ಡಿಸೆಂಬರ್ 2017, 19:46 IST
ಸಲೀಲ್‌ ಎಸ್‌. ಪರೇಖ್‌
ಸಲೀಲ್‌ ಎಸ್‌. ಪರೇಖ್‌   

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕಾಗಿ ಸಲೀಲ್‌ ಎಸ್‌. ಪಾರೇಖ್‌ ನೇಮಕವಾಗಿದ್ದಾರೆ.

ವಿಶಾಲ್‌ ಸಿಕ್ಕಾ ತೆರವುಗೊಳಿಸಿದ ಹುದ್ದೆಗೆ ಹೊಸಬರ ನೇಮಕ ಕುರಿತ ಮೂರು ತಿಂಗಳ ಹುಡುಕಾಟ ಈಗ ಕೊನೆಗೊಂಡಿದೆ. ಪಾರೇಖ್‌ ಅವರು ಜನವರಿ 2 ರಂದು ಅಧಿಕಾರ ಸ್ವೀಕರಿಸಲಿದ್ದು, ಐದು ವರ್ಷಗಳವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಇನ್ಫೊಸಿಸ್ ತಿಳಿಸಿದೆ.

ಸಂಸ್ಥೆಯು ಸಿಇಒ ಹುದ್ದೆಗೆ ಹೊರಗಿನವರನ್ನು ಆಯ್ಕೆ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2014ರಲ್ಲಿ ವಿಶಾಲ್‌ ಸಿಕ್ಕಾ ಅವರು ಸಂಸ್ಥೆಯ ಸಹ ಸ್ಥಾಪಕರಲ್ಲದ ಮೊದಲ ಸಿಇಒ ಆಗಿ ಸಂಸ್ಥೆ ಸೇರಿದ್ದರು. ಹೊಸದಾಗಿ ನೇಮಕ ಆಗಿರುವ ಪಾರೇಖ್‌ ಸಹ ಫ್ರಾನ್ಸ್‌ನ ಕ್ಯಾಪ್‌ಜೆಮಿನಿ ಸಂಸ್ಥೆಯಲ್ಲಿ ಸಮೂಹದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.

ADVERTISEMENT

ಸದ್ಯ, ಹಂಗಾಮಿ ಸಿಇಒ ಆಗಿರುವ ಯು.ಬಿ. ಪ್ರವೀಣ್‌ ರಾವ್‌ ಅವರು ಜನವರಿ 2ರ ಬಳಿಕ ಸಂಸ್ಥೆಯ ಮುಖ್ಯ ಕಾರ್ಯಕಾರಿಣಿ ಅಧಿಕಾರಿಯಾಗಿ (ಸಿಒಒ) ಮತ್ತು ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

‘ಸಲೀಲ್‌ ಅವರಿಗೆ ಐ.ಟಿ ಸೇವೆಗಳ ಉದ್ಯಮದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಇದೆ. ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮತ್ತು ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಉತ್ತಮ ಸಾಧನೆಯನ್ನು ಹೊಂದಿದ್ದಾರೆ’ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದ್ದಾರೆ.

‘ಸಿಇಒ ಹುದ್ದೆಗೆ ಯೋಗ್ಯ ಅಭ್ಯರ್ಥಿ ಆಯ್ಕೆಗಾಗಿ ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸಲಾಗಿತ್ತು. ಆಗ ದೊರೆತ ಅರ್ಹ ಅಭ್ಯರ್ಥಿಗಳಲ್ಲಿ ಸಲೀಲ್‌ ಅವರು ಹೆಚ್ಚು ಯೋಗ್ಯರು ಎಂದು ಪರಿಗಣಿಸಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ನೇಮಕಾತಿ ಸಮಿತಿ ಅಧ್ಯಕ್ಷೆ ಕಿರಣ್‌ ಮಜುಮ್ದಾರ್‌ ಷಾ ಹೇಳಿದ್ದಾರೆ.
*
ಸವಾಲು ಹಲವು
ಪಾರೇಖ್‌ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬರಲಿದೆ ಎಂದು ಉದ್ಯಮ ವಲಯದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಎಷ್ಟರಮಟ್ಟಿನ ಸ್ವಾತಂತ್ರ್ಯ ಸಿಗಲಿದೆ ಎನ್ನುವುದರ ಮೇಲೆ ಅವರ ಹೊಣೆಗಾರಿಕೆ ಅವಲಂಬಿತವಾಗಿರಲಿದೆ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ತ್ವರಿತಗತಿಯ ಬದಲಾವಣೆಗಳು ನಡೆಯುತ್ತಿವೆ. ಇದರಿಂದ ಉದ್ಯಮದಲ್ಲಿ ಸ್ವಯಂಚಾಲನಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ದೊರೆತಿದೆ. ಈ ಬಗ್ಗೆ ಕಾರ್ಯತಂತ್ರ ರೂಪಿಸಬೇಕಿದೆ. ಹಲವು ದೇಶಗಳಲ್ಲಿ ವೀಸಾ ನೀಡಿಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆಎಂದು ಹೇಳಿದ್ದಾರೆ.
*
ವಿವಾದಕ್ಕೆ ತೆರೆ
‘ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನಲ್ಲಿ ಈಗ ಎಲ್ಲವೂ ಸರಿಯಾಗಿದೆ’ ಎಂದು ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು ಇತ್ತೀಚೆಗಷ್ಟೇ ಹೇಳಿ, ವಿವಾದಗಳಿಗೆ ತೆರೆ ಎಳೆದಿದ್ದರು.

‘ಸಂಸ್ಥೆಯಲ್ಲಿನ ಹಲವಾರು ಗೋಜಲುಗಳನ್ನು ಬಿಡಿಸುವ ವಿಶಿಷ್ಟ ಸಾಮರ್ಥ್ಯವು ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರಲ್ಲಿ ಇದೆ. ಸಂಸ್ಥೆಯಲ್ಲಿ ಈಗ ಎಲ್ಲವೂ ಖಂಡಿತವಾಗಿಯೂ ಸರಿ ಇದೆ’ ಎಂದು ಅಭಿಪ್ರಾಯಪಟ್ಟಿದ್ದರು.
*
ಐ.ಟಿ ಉದ್ಯಮವು ಭಾರಿ ಬದಲಾವಣೆಯ ಕಾಲಘಟ್ಟದಲ್ಲಿದ್ದು, ಸಂಸ್ಥೆ ಮುನ್ನಡೆಸಲು ಪರೇಖ್‌ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂಬುದು ಆಡಳಿತ ಮಂಡಳಿಯ ನಂಬಿಕೆಯಾಗಿದೆ ನಂದನ್‌ ನಿಲೇಕಣಿ,
ಇನ್ಫೊಸಿಸ್‌ ಅಧ್ಯಕ್ಷ
*
ಸಲೀಲ್‌ ಪಾರೇಖ್‌ ಅವರನ್ನು ನೇಮಕ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಅವರನ್ನು ಅಭಿನಂದಿಸುತ್ತೇನೆ
ಎನ್‌.ಆರ್‌.ನಾರಾಯಣಮೂರ್ತಿ
ಇನ್ಫೊಸಿಸ್‌ ಸಹ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.