ADVERTISEMENT

ಇನ್‌ಸ್ಪೆಕ್ಟರ್, ಹೆಡ್‌ ಕಾನ್‌ಸ್ಟೆಬಲ್ ಗಂಭೀರ

ತುಮಕೂರಿನಲ್ಲಿ ಸಿಸಿಬಿ ಪೊಲೀಸರ ಕಾರು ಅಪಘಾತಕ್ಕೀಡಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:37 IST
Last Updated 22 ಜುಲೈ 2016, 19:37 IST

ಬೆಂಗಳೂರು: ಪುಣೆಯಲ್ಲಿ ಸರಗಳ್ಳನನ್ನು ಬಂಧಿಸಿ ನಗರಕ್ಕೆ ಕರೆ ತರುತ್ತಿದ್ದ ವೇಳೆ ತುಮಕೂರಿನಲ್ಲಿ ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯ ಗೊಂಡಿರುವ ಸಿಸಿಬಿ ಇನ್‌ಸ್ಪೆಕ್ಟರ್ ಆನಂದ್ ಕಬ್ಬೂರಿ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಜಬೀವುಲ್ಲಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ಆನಂದ್ ಅವರು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಜಬೀವುಲ್ಲಾ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೂ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. 72 ತಾಸು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಕೌಶಲೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತರೆ ಗಾಯಾಳುಗಳಾದ ಇನ್‌ಸ್ಪೆಕ್ಟರ್ ಗಿರೀಶ್, ಕಾನ್‌ಸ್ಟೆಬಲ್‌ ಗಳಾದ ಸತೀಶ್, ಕುಮಾರಸ್ವಾಮಿ, ಮಹದೇವ್ ಹಾಗೂ ಚೇತನ್ ಅವರು ಚೇತರಿಸಿಕೊಂಡಿದ್ದಾರೆ. ಊರುಕೆರೆ ಬಳಿಯ ತಿರುವಿನಲ್ಲಿ ಒಮ್ಮೆಲೆ ಎದುರಾದ ಲಾರಿಯನ್ನು ಕಂಡು ಜಬೀವುಲ್ಲಾ ವಿಚಲಿತರಾದರು. ಇದರಿಂದ ಅಪಘಾತ ಸಂಭವಿಸಿತು ಎಂದು  ಗಾಯಾಳುಗಳು ಹೇಳಿಕೆ ಕೊಟ್ಟಿದ್ದಾರೆ’.

ಬಾಡಿಗೆ ಕಾರು: ‘ಇರಾನಿ ಗ್ಯಾಂಗ್‌ನ ಸದಸ್ಯ ಅಲಿ (26) ಎಂಬಾತ ಇದೇ ಜನವರಿಯಲ್ಲಿ ಮಹಿಳೆಯೊಬ್ಬರ ಸರ ದೋಚಿದ್ದ. ಆ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇತ್ತೀಚೆಗೆ ಆತ ಪುಣೆಯಲ್ಲಿಯೂ ತನ್ನ ಕೈಚಳಕ ತೋರಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಸಿಬ್ಬಂದಿಯ ತಂಡ, ಇನೋವಾ ಕಾರನ್ನು ಬಾಡಿಗೆ ಪಡೆದು ಮಂಗಳವಾರ ಪುಣೆಗೆ ತೆರಳಿತ್ತು’ ಎಂದು ಡಿಸಿಪಿ ಮಾಹಿತಿ ನಿಡಿದರು.

‘ಬಾತ್ಮೀದಾರರು ನೀಡಿದ ಸುಳಿವು ಆಧರಿಸಿ ತಂಡ ಒಂದೇ ದಿನದಲ್ಲಿ ಆಲಿಯನ್ನು ಪತ್ತೆ ಮಾಡಿತ್ತು. ವಾಪಸ್ ನಗರಕ್ಕೆ ಕರೆತರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಂತರ ಅಲಿ ಬೇಡಿ ಸಮೇತ ಪರಾರಿಯಾಗಿದ್ದಾನೆ’. ‘ಈ ಸಂಬಂಧ ತುಮಕೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಲಿ ಭಾಗಿಯಾಗಿದ್ದು, ಆತನ ಪತ್ತೆಗೆ ಸಿಸಿಬಿಯಿಂದಲೂ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿದರು.

ದ್ರವ ಆಹಾರ
‘ಇನ್‌ಸ್ಪೆಕ್ಟರ್ ಆನಂದ್ ಅವರಿಗೆ ಪೈಪ್ ಮೂಲಕ ದ್ರವ ರೂಪದ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ಹಾಲು ಹಾಗೂ ಹಣ್ಣಿನ ರಸ ನೀಡಲಾಗಿದೆ. ಆಸ್ಪತ್ರೆಗೆ ದಾಖಲಿಸಿ ದಾಗ ನಿಸ್ತೇಜರಾಗಿದ್ದ ಅವರು, ಈಗ ಕೈ–ಕಾಲುಗಳನ್ನು ಮಿಸುಕಾಡಿ ಸುತ್ತಿದ್ದಾರೆ. ಆದರೆ, ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿಲ್ಲ’ ಎಂದು ಸಿಸಿಬಿ ಸಿಬ್ಬಂದಿ ಹೇಳಿದರು.

ಚಾಲಕ ಬದಲಾಗಿದ್ದರು

‘ಚೇತನ್  ಸಿಸಿಬಿಯ ಕಾರು ಚಾಲಕರಾಗಿದ್ದಾರೆ. ಮಂಗಳವಾರ ಹಾಗೂ ಬುಧವಾರ ಕಾರು ಚಲಾ ಯಿಸಿದ್ದರಿಂದ ಅವರಿಗೆ ನಿದ್ರೆ ಮಂಪರು ಆವರಿಸಿತ್ತು. ಹೀಗಾಗಿ ಜಬೀವುಲ್ಲಾ, ಚೇತನ್‌ ಅವರನ್ನು ಮಲಗುವಂತೆ ಹಿಂದಿನ ಸೀಟಿಗೆ ಕಳುಹಿಸಿ ತಾವೇ ಚಾಲನೆ ಮಾಡುತ್ತಿ ದ್ದರು. ಅವರಿಗೂ ಚೆನ್ನಾಗಿ ಡ್ರೈವಿಂಗ್ ಬರುತ್ತಿತ್ತು’ ಎಂದು ತಂಡದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಮುಂದೆ ಕುಳಿತಿದ್ದರಿಂದ ಜಬೀ ವುಲ್ಲಾ, ಆನಂದ್‌ ಅವರಿಗೆ ಗಂಭೀರ ಪೆಟ್ಟು ಬಿತ್ತು. ನಾವು ಕಳ್ಳನನ್ನು ಮಧ್ಯದಲ್ಲಿ ಕೂರಿಸಿ ಹಿಂದಿನ ಸೀಟಿ ನಲ್ಲಿ ಕುಳಿತಿದ್ದೆವು. ಕಾರು ಮಗುಚು ತ್ತಿದ್ದಂತೆ ಆರೋಪಿ   ಓಡಲಾರಂಭಿಸಿದ. ಸ್ವಲ್ಪದೂರ ಬೆನ್ನ ಟ್ಟಿ ದರೂ, ಹಿಡಿಯಲು ಆಗಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT