ADVERTISEMENT

ಈಶಾನ್ಯ ಜನರ ವಲಸೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಬೆಂಗಳೂರು: ನಗರದಿಂದ ಈಶಾನ್ಯ ರಾಜ್ಯಗಳ ನಾಗರಿಕರ ವಲಸೆ ಸಂಪೂರ್ಣ ನಿಂತಿದೆ. ಗುವಾಹಟಿಗೆ ತೆರಳಿರುವ ವಿಶೇಷ ರೈಲುಗಳು ವಾಪಸ್ ಬರಲಾರಂಭಿಸಿವೆ. ಆದರೆ, ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.

`ಕಳೆದ ವಾರ ವಲಸೆ ಹೋದವರು ವಾಪಸ್ ಬರಲು 10 ದಿನಗಳು ಕಳೆಯಬಹುದು. 10-15 ದಿನಗಳ ಹಿಂದೆ ಊರಿಗೆ ಹೋದವರು ಈ ರೈಲುಗಳಲ್ಲಿ ಬಂದಿದ್ದಾರೆ. ಮಂಗಳವಾರ ವಾಪಸ್ ಬಂದ ರೈಲಿನಲ್ಲಿ ಬೆರಳೆಣಿಕೆಯ ಮಂದಿ ಇದ್ದರು~ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ವಲಸೆ ನಿಂತಿರುವುದರಿಂದ ಈಗಾಗಲೇ ನಿಗದಿಪಡಿಸಿರುವಂತೆ ಪರೀಕ್ಷೆಗಳನ್ನು ನಡೆಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಾಲೇಜುಗಳು ವಿಶ್ವಾಸ ವ್ಯಕ್ತಪಡಿಸಿವೆ.

ಪದವಿ ಪರೀಕ್ಷೆಗಳು ಇದೇ 27ರಿಂದ ಆರಂಭಗೊಳ್ಳಲಿವೆ. `ಈಗಾಗಲೇ ನಿಗದಿಪಡಿಸಿರುವಂತೆ ಪರೀಕ್ಷೆಗಳು ಮುಂದಿನ ವಾರ ನಡೆಯಲಿವೆ. ಅಭದ್ರತೆಯ ಭಾವದಿಂದ ತಮ್ಮೂರಿಗೆ ತೆರಳಿರುವ ವಿದ್ಯಾರ್ಥಿಗಳು ಭಾನುವಾರದೊಳಗೆ ವಾಪಸ್ ಬರುವ ನಿರೀಕ್ಷೆ ಇದೆ~ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಎಂ. ಜ್ಯೂನಿತಾ ವಿಶ್ವಾಸ ವ್ಯಕ್ತಪಡಿಸಿದರು.

`ಕಡಿಮೆ ಕಾಲಾವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಬರಲು ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆ ಇಲ್ಲ. ನಾವು ಮೃದು ಧೋರಣೆ ಹೊಂದಿದ್ದು, ಮುಂದಿನ ವಾರದೊಳಗೆ ವಾಪಸಾಗದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸಲಾಗುವುದು. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್ಸಿನಲ್ಲಿಯೇ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಐದು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಿದ್ದಾರೆ~ ಎಂದರು.

`ಪರೀಕ್ಷೆಗಳನ್ನು ಮುಂದೂಡುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಕಾಲ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಕಾಲೇಜುಗಳಿಗೆ ಸೂಚಿಸಲಾಗಿದೆ~ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ `ಪ್ರಜಾವಾಣಿ~ಗೆ ಮಂಗಳವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.