ADVERTISEMENT

ಈಶಾನ್ಯ ರಾಜ್ಯದವರ ಗುಳೆ: ಉದ್ಯೋಗಿಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ಈಶಾನ್ಯ ರಾಜ್ಯದವರ ಗುಳೆ: ಉದ್ಯೋಗಿಗಳ ಕೊರತೆ
ಈಶಾನ್ಯ ರಾಜ್ಯದವರ ಗುಳೆ: ಉದ್ಯೋಗಿಗಳ ಕೊರತೆ   

ಬೆಂಗಳೂರು: ಈಶಾನ್ಯ ರಾಜ್ಯದ ಜನರು ನಗರದಿಂದ ಗುಳೆ ಹೊರಟಿರುವ ಪರಿಣಾಮ ಭದ್ರತಾ ಸೇವಾ ಕ್ಷೇತ್ರದಲ್ಲಿ ಉದ್ಯೋಗಿಗಳ ಕೊರತೆ ಎದುರಾಗಿದ್ದು, ಭದ್ರತಾ ಏಜೆನ್ಸಿಗಳ ಮಾಲೀಕರು ತೀವ್ರ ಆತಂಕವನ್ನು ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಐದು ಲಕ್ಕಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದು, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಮೇಘಾಲಯಗಳ ಭಾಗದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನಗರದಲ್ಲಿ ಹಬ್ಬಿರುವ ಸುಳ್ಳು ವದಂತಿಗಳನ್ನು ನಂಬಿರುವ ಈ ಉದ್ಯೋಗಿಗಳು ತವರಿನತ್ತ ಮುಖಮಾಡಿರುವುದರಿಂದ ಭದ್ರತಾ ಕಾರ್ಯಕ್ಕೆ ತೊಂದರೆಯಾಗಿದೆ.

ಈ ಬಗ್ಗೆ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸೆಕ್ಯೂರಿಟಿ ಸರ್ವೀಸಸ್ಸ್ ಅಸೋಸಿಯೇಷನ್ ಅಧ್ಯಕ್ಷ ಲೆಫ್ಟಿನೆಂಟ್ ಕೆ.ಪಿ.ನಾಗೇಶ್‌`ನಗರದಲ್ಲಿರುವ ಐಟಿ, ಬ್ಯಾಂಕಿಂಗ್, ಹಣಕಾಸು, ಉತ್ಪಾದನಾ ಘಟಕ, ಆಸ್ಪತ್ರೆ, ಚಿಲ್ಲರೆ ಮಳಿಗೆ, ದೇವಸ್ಥಾನ ಸೇರಿದಂತೆ ವಿವಿಧ ಕಡೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವ ಈಶಾನ್ಯ ಭಾಗದ ಜನರು ಆಧಾರಹಿತ ವದಂತಿಯಿಂದ ಗುಳೆ ಹೊರಟಿರುವುದು ಈ ಏಜೆನ್ಸಿಗಳ ನಿರ್ವಹಣೆಗೆ ಸವಾಲು ಎದುರಾಗುವಂತೆ ಮಾಡಿದೆ~ ಎಂದು ತಿಳಿಸಿದರು.

`ಈವರೆಗೆ 6 ಸಾವಿರಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿ ಕೆಲಸ ಬಿಟ್ಟು ಊರಿಗೆ ತೆರಳಿದ್ದಾರೆ. ಇರುವವರನ್ನೆ ಹೆಚ್ಚಿನ ಅವಧಿಗೆ ಕೆಲಸ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಈಶಾನ್ಯ ಭಾಗದ ಜನರ ಮನೆಗಳಿಗೆ ತೆರಳಿ ಊರು ಬಿಡದಂತೆ ಕೋರಿಕೊಳ್ಳುತ್ತಿದ್ದೇವೆ.

ಎಲ್ಲ ವಿಧದ ಸುರಕ್ಷತೆಯನ್ನು ನೀಡುತ್ತೇವೆ ಎಂದು ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದೇವೆ. ಇದರೊಂದಿಗೆ ರಾಜ್ಯ ಸರ್ಕಾರ ಕೂಡಲೇ ಅಸ್ಸಾಂನ ಸರ್ಕಾರರೊಂದಿಗೆ ಮಾತುಕತೆ ನಡೆಸಿ ಇಲ್ಲಿರುವ ಜನತೆ ಸುರಕ್ಷಿತರಾಗಿದ್ದಾರೆ ಎಂಬ ಸಂದೇಶವನ್ನು ರವಾನಿಸಿದರೆ, ಅಸ್ಸಾಂನಲ್ಲಿ ಪೋಷಕರು ನೆಮ್ಮದಿಯಿಂದ ಇರುತ್ತಾರೆ, ಆಗ ತವರಿಗೆ ಬನ್ನಿ ಎಂಬ ಒತ್ತಡ ಕಡಿಮೆಯಾಗಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಈಶಾನ್ಯ ಭಾಗದ ಭದ್ರತಾ ಸಿಬ್ಬಂದಿಯ ಹಲ್ಲೆ ನಡೆದಿರುವ ಯಾವುದೇ ಘಟನೆ ನಡೆದಿಲ್ಲ. ಕೆಲವು ಕಿಡಿಗೇಡಿಗಳು ಸುಮ್ಮನೆ ವದಂತಿ ಹಬ್ಬಿಸುತ್ತಿದ್ದಾರೆ. ತಲೆದೋರಿರುವ ಆತಂಕವನ್ನು ನೀಗಿಸಲು ಮತ್ತು ಆತ್ಮವಿಶ್ವಾಸವನ್ನು ತುಂಬಲು ಸರ್ಕಾರ ಗೃಹರಕ್ಷಕ ದಳವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಬೇಕು~ ಎಂದು ಸಲಹೆ ನೀಡಿದರು.

ಕಾಯಕ ನಿಷ್ಠರು: `ಈಶಾನ್ಯ ಭಾಗದ ಜನರು ಕಾಯಕ ನಿಷ್ಠೆಯಿಂದ ಕಾರ್ಯನಿರ್ವಹಿಸುವವರು. ಪ್ರಾಮಾಣಿಕತೆ ಮತ್ತು ಕಷ್ಟಸಹಿಷ್ಣುತೆಗೆ ಹೆಸರಾದವರು. ನಂಬಿಕೆಗೆ ಅರ್ಹರಾದವರನ್ನು ಮಾತ್ರ ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ~ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಭದ್ರತೆ
`ಈಶಾನ್ಯ ರಾಜ್ಯದಿಂದ ಆನೇಕಲ್‌ನಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಒಟ್ಟು 30 ಜನ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ ವದಂತಿ ಹಬ್ಬಿರುವ ಹಿನ್ನೆಲೆಯ ್ಲಲಿ ಈ ವಿದ್ಯಾರ್ಥಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ. 

ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಶಿವಕುಮಾರ್ ಮಠದ, `ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ನಡೆಸುತ್ತಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಈವರೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ವಿಶ್ವವಿದ್ಯಾಲಯದಲ್ಲಿ ಸಂಪೂರ್ಣ ಭದ್ರತೆ ನೀಡಲಾಗಿದೆ~ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.