ADVERTISEMENT

ಈಶ್ವರಪ್ಪ ಪಟ್ಟು: ಕಗ್ಗಂಟಾದ ಮೇಯರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಬೆಂಗಳೂರು: ಕುರುಬ ಸಮುದಾಯಕ್ಕೆ ಸೇರಿದ ಡಿ. ವೆಂಕಟೇಶಮೂರ್ತಿ ಅವರನ್ನೇ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬುಧವಾರ ಕೂಡ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಕಸರತ್ತು ಪೂರ್ಣಗೊಳ್ಳಲಿಲ್ಲ.

ಗುರುವಾರ ಬೆಳಿಗ್ಗೆ 9 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರ ಅಭಿಪ್ರಾಯ ಪಡೆದ ನಂತರ ಅಂತಿಮವಾಗಿ ಮೇಯರ್ ಹಾಗೂ ಉಪ ಮೇಯರ್ ಆಕಾಂಕ್ಷಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯ ಹಿರಿಯ ಸದಸ್ಯ ಡಿ. ವೆಂಕಟೇಶಮೂರ್ತಿ (ಕತ್ರಿಗುಪ್ಪೆ) ಹಾಗೂ ವಿ. ಸೋಮಶೇಖರ್ (ಶಾಖಾಂಬರಿನಗರ) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಇಬ್ಬರು ಕೂಡ ಕುರುಬ ಸಮುದಾಯಕ್ಕೆ ಸೇರಿದವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಡಿ. ವೆಂಕಟೇಶಮೂರ್ತಿ ಅವರನ್ನೇ ಮೇಯರ್ ಆಗಿ ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದರೆ, ನಗರದ ಬಹುತೇಕ ಶಾಸಕರಿಗೆ ಮೂರ್ತಿ ಅವರನ್ನು ಮೇಯರ್ ಮಾಡಲು ಇಷ್ಟವಿಲ್ಲ.

ADVERTISEMENT

ನಗರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಅವರು ವಿ. ಸೋಮಶೇಖರ್ ಬೆಂಬಲಕ್ಕೆ ನಿಂತಿದ್ದಾರೆ. ಇವರನ್ನೇ ಮೇಯರ್ ಮಾಡಲು ನಗರದ ಬಹುತೇಕ ಶಾಸಕರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ, ಗುರುವಾರ ನಡೆಯಲಿರುವ ಸಭೆಯಲ್ಲಿ ಮೇಯರ್ ಸ್ಥಾನದ ಅದೃಷ್ಟ ಯಾರಿಗೆ ಒಲಿಯುತ್ತದೆಯೋ ಕಾದು ನೋಡಬೇಕಾಗಿದೆ.

ಈ ನಡುವೆ, ಉಪ ಮೇಯರ್ ಸ್ಥಾನಕ್ಕೆ ಎಲ್. ಶ್ರೀನಿವಾಸ್ (ಪದ್ಮನಾಭನಗರ), ಕೆ.ಎ.ಮುನೀಂದ್ರಕುಮಾರ್ (ಜಕ್ಕೂರು) ಹಾಗೂ ಎನ್.ಆರ್.ಶ್ರೀಧರರೆಡ್ಡಿ (ದೊಡ್ಡನೆಕ್ಕುಂದಿ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಡಳಿತ ಪಕ್ಷದ ನಾಯಕನ ಸ್ಥಾನಕ್ಕೆ ವಿಜಯನಗರ ವಾರ್ಡ್‌ನ ರವೀಂದ್ರ ಹಾಗೂ ಚಿಕ್ಕಪೇಟೆ ವಾರ್ಡ್ ಸದಸ್ಯ ಶಿವಕುಮಾರ್ ಹೆಸರುಗಳು ಕೇಳಿ ಬರುತ್ತಿವೆ.

ಮಧ್ಯಾಹ್ನ ಚುನಾವಣೆ:  ಗುರುವಾರ ಮಧ್ಯಾಹ್ನ 2 ಗಂಟೆಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿರುವುದರಿಂದ ಬೆಳಿಗ್ಗೆ ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ಮಧ್ಯಾಹ್ನ ಔಪಚಾರಿಕವಾಗಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ. ಬೆಳಿಗ್ಗೆ ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡಿದ ಅಭ್ಯರ್ಥಿಗಳೇ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗಳಿಗೆ ಆಯ್ಕೆಯಾಗಲಿದ್ದಾರೆ.

ಈ ಬಾರಿ ಮೇಯರ್ ಸ್ಥಾನವು ಹಿಂದುಳಿದ ವರ್ಗಗಳ `ಎ~ (2 ಎ) ವರ್ಗಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.