ADVERTISEMENT

ಉಚಿತ ಕಾನೂನು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:05 IST
Last Updated 16 ಅಕ್ಟೋಬರ್ 2012, 19:05 IST

ಹೊಸಕೋಟೆ: `ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿಯ ಆದಾಯ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಇದ್ದಲ್ಲಿ ಆತ ಹತ್ತಿರದ ನ್ಯಾಯಾಲಯದಲ್ಲಿರುವ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಕಾನೂನು ಸಲಹೆ ಪಡೆಯಬಹುದು. ಅಲ್ಲದೆ ಅವಶ್ಯವಿದ್ದಲ್ಲಿ ಆತನ ಕಾನೂನು ಹೋರಾಟಕ್ಕೆ ಸರ್ಕಾರವೇ ವೆಚ್ಚ ಭರಿಸಲಿದೆ~ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ಗೋಮತಿ ಎಂ.ಶೇಠ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಶಿಬಿರ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಮಾಜದಲ್ಲಿ ಪ್ರತಿನಿತ್ಯ ಕಾನೂನು ಅವಿಭಾಜ್ಯ ಅಂಗವಾಗಿದ್ದು ಅದನ್ನು ಪ್ರತಿಯೊಬ್ಬರೂ  ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು~ ಎಂದರು.

ನ್ಯಾಯಾಧೀಶರಾದ ಎಸ್.ಶರ್ಮಿಳಾ ಮಾತನಾಡಿ ಮಹಿಳೆಯರು ಕಾನೂನುಗಳನ್ನು ಅರಿಯುವುದರ ಮೂಲಕ ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯುವಂತೆ ಸೂಚಿಸಿದರು.

ಜಿ.ಪಂ. ಅಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹನುಮಂತೇಗೌಡ ಉಪಸ್ಥಿತರಿದ್ದರು. ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕಲ್ಲಹಳ್ಳಿ ಚಂದ್ರಪ್ಪ ಸ್ವಾಗತಿಸಿದರು. ಸ್ತ್ರೀಯರ ಹಕ್ಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಜೆ.ಲಕ್ಷ್ಮೆ, ಅನಿತಾ, ಎನ್.ಲಕ್ಷ್ಮಣಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.