ADVERTISEMENT

`ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿ'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: `ಪ್ರತಿಯೊಬ್ಬರು ಉತ್ತಮವಾದ ಸಮಾಜವನ್ನು ಕಟ್ಟಲು ಉತ್ತಮ ಕೊಡುಗೆಗಳನ್ನು ನೀಡಬೇಕು' ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದರು.

ಅಜಂತಾ ಸಾಂಸ್ಕೃತಿಕ ವಿದ್ಯಾಸಂಸ್ಥೆ ಮತ್ತು ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಎಂ.ಶ್ರೀ ಸಹೋದರಿ `ಧೀಮಂತ ಮಹಿಳೆ ದಿ.ನಂಜಮ್ಮ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

`ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ನಾವು ಹುಟ್ಟಿರುವ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿರುವ ಕೆಟ್ಟತನವನ್ನು ಎಣಿಸಿ ಮಾತನಾಡುವ ಬದಲು ನಮ್ಮ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತ ಸಾಗಬೇಕು' ಎಂದರು.

`ಸಮಾಜಕ್ಕೆ ಉತ್ತಮವಾದ ಆದರ್ಶಗಳನ್ನು ನೀಡಿದವರಲ್ಲಿ ಬಿಎಂಶ್ರೀ ಅವರ ಸಹೋದರಿ ದಿ. ನಂಜಮ್ಮನವರೂ ಬರುತ್ತಾರೆ. 1925 ರಿಂದ 1930 ರ ಸಮಯದಲ್ಲಿ ಒಬ್ಬ ಬ್ರಾಹ್ಮಣ ವಿಧವೆಯಾಗಿ ಸಮಾಜ ವಿಧಿಸಿರುವ ಕಟ್ಟಳೆಗಳನ್ನು ದಾಟಿ ಸಮಾಜದ ಮಹಿಳೆಯರಿಗೆ ಆದರ್ಶಪ್ರಾಯವಾಗಿ ಬದುಕಿದರು' ಎಂದರು.

`ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜವನ್ನು ಸ್ಥಾಪಿಸಿ ಅಸಹಾಯಕ ಮಹಿಳೆಯರಿಗೆ ನೆರವಾಗುವಂತೆ ಬಿಎಂಶ್ರೀ ಅವರು ಪ್ರೇರಣೆ ನೀಡಿದರು. ಹಾಗೆಯೇ ಅಣ್ಣ ನಡೆಸಿದ ದಾರಿಯಲ್ಲಿ ನಡೆದು ಆಗಿನ ಸಮಾಜದ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ತೋರಿಸಿಕೊಟ್ಟರು' ಎಂದರು.

ಇತಿಹಾಸ ತಜ್ಞ ಡಾ.ಸೂರ್ಯನಾಥ ಕಾಮತ್ ಮಾತನಾಡಿ, `ಸಮಾಜದ ನಂಜಮ್ಮನೆಂದೇ ಪ್ರಸಿದ್ಧಿಯಾದ ನಂಜಮ್ಮರ ಬದುಕು ಆದರ್ಶನೀಯವಾಗಿದೆ. ಅವರು ಸಮಾಜದಲ್ಲಿರುವ ನಿರ್ಗತಿಕ ಮಹಿಳೆಯರಿಗೆ ಹೊಲಿಗೆ, ನೂಲುವುದು, ಬುಟ್ಟಿ ಹೆಣೆಯುವುದು, ಸಂಗೀತ ತರಬೇತಿ, ಕಸೂತಿ ಕೆಲಸವನ್ನು ಮಹಿಳೆಯರಿಗೆ ಕಲಿಸಿ ಅವರು ಸ್ವಾವಲಂಬಿಗಳಾಗಿ ಬದುಕಲು ಪ್ರೇರಕ ಶಕ್ತಿಯಾದರು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.