ADVERTISEMENT

ಉದ್ದೇಶಿತ ಪ್ರಯಾಣಿಕ ರೈಲು ಸೇವೆ: ಪ್ರಯಾಣಿಕರಿಗೆ ಅನುಕೂಲಕರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಉದ್ದೇಶಿತ ಪ್ರಯಾಣಿಕ ರೈಲು ಸೇವೆ: ಪ್ರಯಾಣಿಕರಿಗೆ ಅನುಕೂಲಕರ
ಉದ್ದೇಶಿತ ಪ್ರಯಾಣಿಕ ರೈಲು ಸೇವೆ: ಪ್ರಯಾಣಿಕರಿಗೆ ಅನುಕೂಲಕರ   

ಬೆಂಗಳೂರು: `ಉದ್ದೇಶಿತ ಪ್ರಯಾಣಿಕ ರೈಲು ಸೇವೆ (ಕಮ್ಯುಟರ್ ರೈಲ್ ಸರ್ವೀಸ್) ಮೆಟ್ರೊ ರೈಲಿಗೆ ಪ್ರತಿಸ್ಪರ್ಧಿಯಲ್ಲ. ನಗರದ ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ನಗರ ಹಾಗೂ ಸುತ್ತಮುತ್ತಲಿನ ನಗರಗಳ ಪ್ರಯಾಣಿಕರಿಗೆ ಈ ಸೇವೆ ಅನುಕೂಲಕರವಾಗಲಿದೆ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ `ಮೂಲಸೌಕರ್ಯ, ಸುಸ್ಥಿರ ಸಾರಿಗೆ, ನಗರ ಯೋಜನೆ (ಸಿಸ್ಟುಪ್) ಕೇಂದ್ರ~ದ ಪ್ರಾಧ್ಯಾಪಕ ಪ್ರೊ. ಸೀತಾರಾಮನ್ ಅಭಿಪ್ರಾಯಪಟ್ಟರು.

ಐಟಿಇಸಿ, ಪ್ರಜಾ, ಹಸಿರು ಉಸಿರು, ಕನ್ಸರ್ನ್, ಏಡ್ ಇಂಡಿಯಾ ಆಶ್ರಯದಲ್ಲಿ  `ಪ್ರಯಾಣಿಕ ರೈಲು ಸೇವೆ-ಬೆಂಗಳೂರಿಗೆ ಇರುವ ಅವಕಾಶ ಕಾರ್ಯಸಾಧುವೇ?~ ಕುರಿತು ನಗರದ ಎಸ್‌ಸಿಎಂ ಹೌಸ್‌ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಚರ್ಚೆ ಹಾಗೂ ಸಂವಾದದಲ್ಲಿ ಅವರು ಆಶಯ ಭಾಷಣ ಮಾಡಿದರು.

`ನಗರದ ಸಂಚಾರ ವ್ಯವಸ್ಥೆಯ ಸ್ಥಿತಿ ಗಂಭೀರವಾಗುತ್ತಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿರ್ವಹಿಸಲು ರಸ್ತೆ ವಿಸ್ತರಣೆ, ಮೇಲು ರಸ್ತೆಗಳು, ತಡೆರಹಿತ ರಸ್ತೆಗಳನ್ನು ನಿರ್ಮಿಸಿದರೂ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಬಿಬಿಎಂಪಿ, ಬಿಡಿಎ ಈ ಸಂಬಂಧ ಯೋಜನೆಗಳನ್ನು ರೂಪಿಸಿದರೂ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಬಸ್ ವ್ಯವಸ್ಥೆ ಎಲ್ಲ ಕಡೆಗೆ ಸಕಾಲಿಕವಾಗಿ ಇಲ್ಲ~ ಎಂದರು.

`ಈಗಿನ ಸಂಚಾರ ದಟ್ಟಣೆಯಿಂದಾಗಿ ನೆಲಮಂಗಲ, ಯಲಹಂಕ, ದೊಡ್ಡಬಳ್ಳಾಪುರ, ತುಮಕೂರು ಸೇರಿದಂತೆ ಹೊರವಲಯದ ಪ್ರದೇಶಗಳ ಜನರು ಆಸ್ಪತ್ರೆ ಸೇರಿದಂತೆ ತುರ್ತು ಕಾರ್ಯಗಳಿಗೆ ಆಗಮಿಸಿದ ವೇಳೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಪ್ರಯಾಣಿಕ ರೈಲು ಸೇವೆ ಜನರಿಗೆ ವರದಾನವಾಗಲಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಕಡಿಮೆ ಇಂಧನ, ಮಿತ ಪ್ರಮಾಣದ ಭೂಸ್ವಾಧೀನ ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ಒದಗಿಸಲು ಈ ಮೂಲಕ ಸಾಧ್ಯವಿದೆ. ಯೋಜನೆಯ ಲಾಭದ ಬಗ್ಗೆ ರೈಲ್ವೆ ಇಲಾಖೆಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರವು ವಿಶೇಷ ಕಾರ್ಯಪಡೆಯೊಂದನ್ನು ರಚಿಸಿ ಆದಷ್ಟು ಶೀಘ್ರದಲ್ಲಿ ಈ ಸೇವೆಯ ಅನುಷ್ಠಾನಕ್ಕೆ ಒತ್ತು ನೀಡಬೇಕು~ ಎಂದರು.

`ಪ್ರಜಾ ರಾಗ್~ ಸಂಘಟನೆಯ ಸಂಜೀವ ದ್ಯಾಮನ್ನವರ್ ಮಾತನಾಡಿ, `ಪ್ರಯಾಣಿಕ ರೈಲು ಸೇವೆಗೆ ಭೂಸ್ವಾಧೀನ ದೊಡ್ಡ ಸಮಸ್ಯೆಯಾಗುವುದಿಲ್ಲ. ಈಗಿರುವ ರೈಲಿನ ಮಾರ್ಗಗಳನ್ನೇ ಬಳಸಿಕೊಂಡು ಕನಿಷ್ಠ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ.

ಈ ರೈಲುಗಳು 24 ಗಂಟೆಗಳ ಕಾಲವೂ ಸಂಚರಿಸಲಿದ್ದು, ಪ್ರತಿ 10 ನಿಮಿಷಕ್ಕೊಂದು ರೈಲು ಇರಲಿದೆ. ಈ ರೈಲುಗಳು ಗಂಟೆಗೆ ಅಂದಾಜು 70 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಈ ರೈಲುಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು. ಆಗ ಸೇವೆಯ ಮೇಲೆ ಜನರಿಗೆ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ~ ಎಂದರು.

`ನಮ್ಮ ಮೆಟ್ರೊದ ಒಂದನೇ ಮತ್ತು ಎರಡನೇ ಹಂತದ ಯೋಜನೆಗಳಿಂದ ಒಟ್ಟು 115 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ 38,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದ್ದು, 405 ಕಿ.ಮೀ. ಉದ್ದದ ಪ್ರಯಾಣಿಕ ರೈಲು ಸಂಪರ್ಕ ಜಾಲಕ್ಕೆ 8,000 ಕೋಟಿ ರೂಪಾಯಿ ಹೂಡಿಕೆ ಸಾಕಾಗುತ್ತದೆ.

ಈ ಸೇವೆ ಅನುಷ್ಠಾನಗೊಂಡರೆ ಮೆಟ್ರೊ ರೈಲು ಬಳಸುವವರ ಸಂಖ್ಯೆಯೂ ಜಾಸ್ತಿಯಾಗಲಿದೆ. ಈ ರೈಲು ಮಾರ್ಗ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಉದ್ಯಮಗಳು ಅಧಿಕ ಸಂಖ್ಯೆಯಲ್ಲಿ ಇರುವಲ್ಲಿಯೇ ಸಾಗಲಿವೆ. ಇದೊಂದು ಜನಸ್ನೇಹಿ ರೈಲು~ ಎಂದು ಅವರು ಅಭಿಪ್ರಾಯಪಟ್ಟರು.`ಪ್ರಜಾ ರಾಗ್~ ಸಂಘಟನೆಯ ಪ್ರಣವ್, ಹಸಿರು ಉಸಿರು ಸಂಘಟನೆಯ ವಿನಯ್, ಶಹೀನ್, ಐಟಿಇಸಿ ಸಂಘಟನೆಯ ಸುರೇಶ್ ಕುಡೂರು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.