ADVERTISEMENT

ಉದ್ಯಮಿಗೆ ₹ 9.6 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 20:06 IST
Last Updated 27 ಫೆಬ್ರುವರಿ 2018, 20:06 IST

ಬೆಂಗಳೂರು: ‘ಮುಂಬೈನ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ವಿರುದ್ಧ ಕರ್ನಾಟಕ ಸರ್ಕಾರ 2015ರಲ್ಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇವತ್ತು ಆತ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಕೋಟ್ಯಂತರ ರೂಪಾಯಿ ವಂಚನೆ ಎಸಗುವುದನ್ನು ತಪ್ಪಿಸಬಹುದಿತ್ತು...’

‘ಮೆಹುಲ್ ಚೋಕ್ಸಿ ನನ್ನ ಜೊತೆ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡು ₹9.6 ಕೋಟಿ ವಂಚನೆ ಎಸಗಿದ್ದಾರೆ’ ಎಂದು ಬೆಂಗಳೂರು ಜೆ.ಪಿ. ನಗರ ನಿವಾಸಿ ಎಸ್‌.ವಿ.ಹರಿಪ್ರಸಾದ್‌ ಸಲ್ಲಿಸಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆ ವೇಳೆ ಈ ಅಂಶವನ್ನು ಹರಿಪ್ರಸಾದ್ ಪರ ವಕೀಲರು ಸೆಷನ್ಸ್‌ ನ್ಯಾಯಾಲಯಕ್ಕೆ ವಿವರಿಸಿದರು.

ಪ್ರಕರಣದ ತನಿಖೆ ಆದೇಶ ಪ್ರಶ್ನಿಸಿ ಚೋಕ್ಸಿ ಸಲ್ಲಿಸಿರುವ ಅರ್ಜಿಯನ್ನು ಸೆಷನ್ಸ್ ನ್ಯಾಯಾಧೀಶ ಜಿ.ಡಿ.ಮಹಾವರ್ಕರ್‌ ಮಂಗಳವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ ಹರಿಪ್ರಸಾದ್‌ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಚೋಕ್ಸಿ ವಿರುದ್ಧ ದೇಶದಾದ್ಯಂತ 42 ವಂಚನೆ ಪ್ರಕರಣ ಬಾಕಿ ಇವೆ. ಈತನ ವಂಚನೆ ಮತ್ತು ಮೋಸವನ್ನು ಮೊದಲು ಬಯಲಿಗೆಳೆದಿದ್ದೇ ನಾವು. ಆದರೆ ಕರ್ನಾಟಕ ಪೊಲೀಸರು ಅಂದು ಗಂಭೀರ ಕ್ರಮ ಕೈಗೊಳ್ಳದೇ ಹೋದರು. ಈಗಲಾದರೂ ಪ್ರಾಸಿಕ್ಯೂಟರ್‌ ಸಂತ್ರಸ್ತ ಅರ್ಜಿದಾರರಿಗೆ ಸಹಾಯ ಮಾಡಬೇಕು’ ಎಂದು ಕೋರಿದರು.

ವಿಚಾರಣೆಯನ್ನು ಬುಧವಾರಕ್ಕೆ (ಫೆ.28) ಮುಂದೂಡಲಾಗಿದ್ದು ಪ್ರಾಸಿಕ್ಯೂಟರ್ ತಮ್ಮ ವಾದ ಮಂಡಿಸಲಿದ್ದಾರೆ.

ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಕೇಸಿನ ಸಂಕ್ಷಿಪ್ತ ಸಾರಾಂಶ : ‘ಎಸ್‌.ವಿ.ಹರಿಪ್ರಸಾದ್  ವಜ್ರಾಭರಣ ವ್ಯಾಪಾರಿಯಾಗಿದ್ದು ಮೆಹುಲ್ ಚೋಕ್ಸಿ ಜೊತೆ 2015ರ ಫೆಬ್ರುವರಿ 12ರಂದು ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಚೋಕ್ಸಿ ಅಧ್ಯಕ್ಷರಾಗಿರುವ ಮುಂಬೈನ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ ಕಂಪನಿಗೆ ಹರಿಪ್ರಸಾದ್‌ 2015ರ ಫೆ.15ರಿಂದ ಅಕ್ಟೋಬರ್ 26ರ ನಡುವಿನ ಅವಧಿಯಲ್ಲಿ ಆರ್‌.ಟಿ.ಜಿ.ಎಸ್‌.ಮೂಲಕ ₹ 9.6 ಕೋಟಿ ಪಾವತಿಸಿದ್ದರು. ಆದರೆ ಚೋಕ್ಸಿ ಒಪ್ಪಂದದ ಪ್ರಕಾರ ನಡೆದುಕೊಂಡಿಲ್ಲ. ನನಗೆ ₹ 9.6 ಕೋಟಿ ವಂಚಿಸಿದ್ದಾರೆ’ ಎಂದು ಸೆಂಟ್ರಲ್‌ ಪೊಲೀಸ್‌ ಠಾಣೆಗೆ ಅವರು ದೂರು ನೀಡಿದ್ದರು.

ಈ ದೂರಿನ ತನಿಖೆ ನಡೆಸಿದ್ದ ಪೊಲೀಸರು ನಗರದ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ 2015ರ ಮಾರ್ಚ್‌ 18 ರಂದು ಬಿ.ರಿಪೋರ್ಟ್‌ ಸಲ್ಲಿಸಿದ್ದರು. ‘ಇದೊಂದು ಸಿವಿಲ್‌ ಸ್ವರೂಪದ ಪ್ರಕರಣ. ಇದರಲ್ಲಿ ವಂಚನೆಯ ಆರೋಪ ಸಾಬೀತು ಮಾಡುವ ಲಕ್ಷಣಗಳಿಲ್ಲ’ ಎಂದು
ಬಿ.ರಿಪೋರ್ಟ್‌ನಲ್ಲಿ ತಿಳಿಸಿದ್ದರು.

ಬಿ.ರಿಪೋರ್ಟ್‌ ಸಲ್ಲಿಸಿದ ಕ್ರಮವನ್ನು ಪ್ರಶ್ನಿಸಿ ಹರಿಪ್ರಸಾದ್‌ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ, ‘ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ’ ಎಂದು ಆಕ್ಷೇಪಿಸಿದ್ದರು. ಪ್ರಕರಣದ ತೀವ್ರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಆದೇಶಿಸಿದ್ದರು.

ಈ ಆದೇಶದ ಅನುಸಾರ ಗೃಹ ಇಲಾಖೆಯು, ಸಿಐಡಿ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿತ್ತು. ಅಂತೆಯೇ ಕಾನೂನು ಪ್ರಕಾರ ಈ ಆದೇಶವನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಗಮನಕ್ಕೆ ತರಲಾಗಿತ್ತು.

ಈ ಅವಗಾಹನೆಯ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು, ‘ನಿಯಮಗಳ ಅನುಸಾರ ಪ್ರಕರಣದ ಮುಂದುವರಿದ ತನಿಖೆ ಕೈಗೊಳ್ಳಿ’ ಎಂದು ಸಿಐಡಿ ಡಿವೈಎಸ್‌ಪಿಗೆ ಆದೇಶಿಸಿದ್ದರು. ಸೆಷನ್ಸ್‌ ನ್ಯಾಯಾಯಾಲಯದಲ್ಲಿ ಚೋಕ್ಸಿ ಈ ಆದೇಶ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.