ADVERTISEMENT

ಉದ್ಯೋಗಿಗಳಿಗೆ ಗಂಭೀರ ಸ್ವರೂಪದ ಗಾಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 18:30 IST
Last Updated 21 ಆಗಸ್ಟ್ 2012, 18:30 IST
ಉದ್ಯೋಗಿಗಳಿಗೆ ಗಂಭೀರ ಸ್ವರೂಪದ ಗಾಯ
ಉದ್ಯೋಗಿಗಳಿಗೆ ಗಂಭೀರ ಸ್ವರೂಪದ ಗಾಯ   

ಬೆಂಗಳೂರು: ಸಾಫ್ಟ್‌ವೇರ್ ಕಂಪೆನಿ ಯೊಂದರಲ್ಲಿ ಏಳನೆ ಅಂತಸ್ತಿನಿಂದ ಲಿಫ್ಟ್ ಬಿದ್ದು ಸಂಭವಿಸಿದ ಅವಘಡದಲ್ಲಿ ಲಿಫ್ಟ್‌ನಲ್ಲಿದ್ದ ಹದಿನೈದು ಮಂದಿ ಗಾಯಗೊಂಡಿರುವ ಘಟನೆ ಮಹದೇವಪುರದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕಂಪೆನಿ ಉದ್ಯೋಗಿಗಳಾದ ಸಂಜೀವ್ (30), ಅರುಣ್ ಕುಮಾರ್ (29),  ಸೋಮಶೇಖರ್ ಬ್ರಿಸ್ತಾ (30),  ಗಂಗಾಧರ್ ನಾಯಕ್ (30), ರಾಮ್‌ಚರಣ್ (30), ನಿಖಿಲೇಶ್ ಕುಮಾರ್ ಯಾದವ್ (30)  ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅದೃಷ್ಟವಷಾತ್ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಪ್ರೇಮ್‌ಚಂದ್, ಮೋಹಿತ್ ಸಿಂಗ್, ಸುನಿಲ್ ಕುಮಾರ್, ಜೋಶಿ ಜಾನ್, ನಿತಿನ್ ರೈ, ವಿಜಯ್ ಕುಮಾರ್, ಅವಿನಾಶ್ ಪಾಂಡೆ, ಮತ್ತು ಶಿವಕುಮಾರ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಹದೇವಪುರ ಬಳಿಯ ಐಟಿಪಿಎಲ್ ಪ್ರದೇಶದಲ್ಲಿ ಎಫ್‌ಜೆಆರ್ ಟೆಕ್‌ಪಾರ್ಕ್ ಎಂಬ ಸಾಫ್ಟ್‌ವೇರ್ ಕಂಪೆನಿ ಇದೆ. ಅದು ಏಳು ಅಂತಸ್ತಿನ ಕಟ್ಟಡವಾಗಿದ್ದು, ಕೊನೆ ಮಹಡಿಯಲ್ಲಿದ್ದ ಉದ್ಯೋಗಿಗಳು ಮಧ್ಯಾಹ್ನ 2.45ರ ಸುಮಾರಿಗೆ ಊಟಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.

`ಮಧ್ಯಾಹ್ನ ನೆಲ ಅಂತಸ್ತಿನಿಂದ ಭಾರಿ ಶಬ್ದ ಕೇಳಿಸಿತು. ಕೆಳಗೆ ಹೋದಾಗ ಲಿಫ್ಟ್‌ನಲ್ಲಿ ಸಹೋದ್ಯೋಗಿಗಳ ಚೀರಾಟ ಕೇಳಿ ಆತಂಕವಾಯಿತು. ಕೂಡಲೇ ಲಿಫ್ಟ್ ನಿರ್ವಹಣೆಯ ಮೇಲ್ವಿಚಾರಕರು ತುರ್ತು ಕೀ ಬಳಸಿ ಲಿಫ್ಟ್‌ನ ಬಾಗಿಲು ತೆಗೆದರು. ಗಾಯಾಳುಗಳನ್ನು ಸಮೀಪದ ವೈದೇಹಿ ಆಸ್ಪತ್ರೆಗೆ ದಾಖಲಿಸಿದೆವು~ ಎಂದು ಕಂಪೆನಿಯ ಉದ್ಯೋಗಿ ಅಮಿತ್ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.

`ತೀವ್ರ ಗಾಯಗೊಂಡವರಲ್ಲಿ ಇಬ್ಬರ ತೊಡೆಯ ಎಲುಬುಗಳು ಮುರಿದಿವೆ. ಉಳಿದವರ ಸೊಂಟದ ಮೂಳೆಗಳು ಮುರಿದಿವೆ. ಸಣ್ಣ ಪುಟ್ಟ ಗಾಯಗಳಾದವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮತ್ತೆ ಕೆಲವರನ್ನು ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ~ ಎಂದು ವೈದ್ಯೆ ಅಶ್ವಿನಿ ಹೇಳಿದರು.

`ಎಫ್‌ಜೆಆರ್ ಗ್ರೂಪ್‌ಗೆ ಸೇರಿದ ಈ ಕಂಪೆನಿಗೆ ಕೋನಾ ಎಂಬ ಹೆಸರಿನ ಕಂಪೆನಿ ಲಿಫ್ಟ್ ಅಳವಡಿಸಿತ್ತಲ್ಲದೆ, ನಿರ್ವಹಣೆ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿತ್ತು. ತಾಂತ್ರಿಕ ದೋಷದಿಂದ ಈ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಕೋನಾ ಕಂಪೆನಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ಮಹದೇವಪುರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.