ADVERTISEMENT

ಎಂ.ಎಸ್. ಮೂರ್ತಿಗೆ ಪ್ರಶಸ್ತಿ: ಕಲಾವಿದರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 20:28 IST
Last Updated 11 ಡಿಸೆಂಬರ್ 2017, 20:28 IST
ಜೀವಮಾನ ಸಾಧನೆಗಾಗಿ ವಿವಿಧ ಕ್ಷೇತ್ರಗಳ 15 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ  ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಇದ್ದರು ಪ್ರಜಾವಾಣಿ ಚಿತ್ರ
ಜೀವಮಾನ ಸಾಧನೆಗಾಗಿ ವಿವಿಧ ಕ್ಷೇತ್ರಗಳ 15 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿತ್ರ ಕಲಾವಿದ ಎಂ.ಎಸ್. ಮೂರ್ತಿ ಅವರಿಗೆ ಜೀವಮಾನದ ಸಾಧನೆಗಾಗಿ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ ನೀಡುವುದನ್ನು ವಿರೋಧಿಸಿ ಕಲಾವಿದರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.

ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಮೂರ್ತಿ ಅವರನ್ನು ಆಹ್ವಾನಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಕುಳಿತಿದ್ದ  ವೆಂಕಟಪ್ಪ ಆರ್ಟ್ ಗ್ಯಾಲರಿ ಫೋರಂನ ಕಲಾವಿದರು ಘೋಷಣೆ ಕೂಗಿದರು. ಮುಖಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು.

ಕೂಡಲೇ ಮಧ್ಯ ‍ಪ್ರವೇಶಿಸಿದ ಪೊಲೀಸರು, ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಹೊರಗೆ ಕೊರೆದೊಯ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ವಿರೋಧ ಏಕೆ?: ಕಲಾರಂಗದಲ್ಲಿನ ಹಿರಿತನ ಮತ್ತು ಅವರ ಒಟ್ಟಾರೆ ಸಾಧನೆ ಪರಿಗಣಿಸಿ ಸರ್ಕಾರ ಪ್ರತಿವರ್ಷ ‌ವೆಂಕಟಪ್ಪ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ವರ್ಷ ಎಲ್ಲಾ ಮಾನದಂಡಗಳನ್ನು ಬದಿಗಿರಿಸಿ 57 ವರ್ಷದ ಎಂ.ಎಸ್. ಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಬರೆದಿದ್ದ ಪತ್ರದ ಪ್ರತಿಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಭಟನಾನಿರತ ಕಲಾವಿದರು ಬಿಡುಗಡೆ ಮಾಡಿದರು.

ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಎಂ.ಎಸ್.ಮೂರ್ತಿ ಇತ್ತೀಚೆಗಷ್ಟೇ ಅವಧಿ ಪೂರೈಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿ ಲಾಬಿ ನಡೆಸಿ ಈ ಪ್ರಶಸ್ತಿ ಪಡೆದಿದ್ದಾರೆ ಎಂದು ಆಪಾದಿಸಿದರು.

‘ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಅದರಂತೆ ಎಂ.ಆರ್‌. ಬಾಳೇಕಾಯಿ ಸಮಿತಿಗೆ ಅಧ್ಯಕ್ಷರಾಗಬೇಕಿತ್ತು. ಆದರೆ, ಎಸ್‌.ಜಿ. ವಾಸುದೇವ್ ಅವರನ್ನುಅಧ್ಯಕ್ಷರ‌ನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದೂ ಆರೋಪಿಸಿದರು.

ಸರ್ಕಾರದ ಹಸ್ತಕ್ಷೇಪ ಇಲ್ಲ

ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವುದರಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಯಾವುದೇ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸಮಿತಿ ರಚಿಸುತ್ತದೆ. ಆ ಸಮಿತಿ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಮಾನದಂಡ ರೂಪಿಸಿ ಅದರ ಘನತೆಯನ್ನು ಸರ್ಕಾರ ಹೆಚ್ಚಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಅವರಲ್ಲಿ ಹಿರಿಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ’ ಎಂದರು.

15 ಸಾಧಕರಿಗೆ ಪ್ರಶಸ್ತಿ ಪ್ರದಾನ

ಪಂಡಿತ ರಘುನಾಥ ನಾಕೋಡ್‌, ಸ. ಉಷಾ, ಜಿ. ಮಾದೇಗೌಡ, ಥೆರೇಸಮ್ಮ ಡಿಸೋಜಾ, ಬಿ.ಎ. ಜಮಾದಾರ್, ನಂದಿನಿ ಈಶ್ವರ್, ಶಾಂತಾ ಕೌತಾಳ, ಅಮೀನ್ ಸಾ ಶರೀಫ್ ವಠಾರ, ಬಿ. ರಾಮದಾಸಪ್ಪ, ಎಚ್‌.ಎನ್‌.ಕೃಷ್ಣಮೂರ್ತಿ, ಎಂ.ಎಸ್.ಮೂರ್ತಿ, ಉಡುತಡಿಯ ಅಕ್ಕಮಹಾದೇವಿ ಸಮಿತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ, ಲಲಿತಾ ಜೆ.ರಾವ್ ಅವರಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.