ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಕ್ಕೆ ಒಳಗಾದವರ ಪೈಕಿ ಶೇಕಡ 25ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವವರಿಗೆ ಈಗಾಗಲೇ ದೊರೆಯುತ್ತಿರುವ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಶುಕ್ರವಾರ ಕಿವಿಮಾತು ಹೇಳಿತು.
ಶೇ 25ರಿಂದ ಶೇ 60ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮಾಸಿಕ ರೂ. 1,500 ಮತ್ತು ಶೇ 60ಕ್ಕಿಂತ ಹೆಚ್ಚು ಅಂಗವೈಕಲ್ಯದ ವ್ಯಕ್ತಿಗಳಿಗೆ ರೂ. 3,000 ಮಾಸಿಕ ಪರಿಹಾರ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಜನವರಿ 27ರಂದು ಸರ್ಕಾರಕ್ಕೆ ಆದೇಶಿಸಿತ್ತು.
ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮ ಕುರಿತು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು ಬರೆದ ಪತ್ರ ಆಧರಿಸಿ ವಿಭಾಗೀಯ ಪೀಠ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ಶೇ 25ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರ ಪೈಕಿ ಶೇ 10ರಷ್ಟು ಜನಕ್ಕೆ ಮಾತ್ರ ಮಾಸಿಕ ಪರಿಹಾರ ಧನ ದೊರೆಯುತ್ತಿದೆ ಎಂಬುದನ್ನು ಒಪ್ಪಿಕೊಂಡ ಸರ್ಕಾರ, ‘ಇನ್ನುಳಿದವರಿಗೂ ಈ ಸೌಲಭ್ಯ ದೊರೆಯುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ’ ಎಂದು ತಿಳಿಸಿತು.
ಮೂರು ಜಿಲ್ಲೆಗಳಲ್ಲಿ ಎಂಡೋ-ಸಲ್ಫಾನ್‌ನಿಂದ ಶೇ 25ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರನ್ನು ಇನ್ನು ಒಂದು ತಿಂಗಳಲ್ಲಿ ಗುರುತಿಸಲಾಗುವುದು. ಅವರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ಪರಿಹಾರ ಧನವನ್ನು ಹಿಂಬಾಕಿ ಸಮೇತ ಪಾವತಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪೀಠಕ್ಕೆ ಹೇಳಿದರು.
ಈ ಪ್ರಕರಣದಲ್ಲಿ ಕೋರ್ಟ್ ಜ. 27ರಂದು ನೀಡಿದ್ದ ಆದೇಶವನ್ನು ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವಾಲಯಕ್ಕೆ ರವಾನಿಸಿ, ಎಂಡೋಸಲ್ಫಾನ್ ಪೀಡಿತರಿಗೆ ‘ನಿರಾಮಯ’ ಯೋಜನೆಯ ಅಡಿ ಸೌಲಭ್ಯಗಳನ್ನು ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರದ ಪರ ವಕೀಲೆ ಎಂ.ಆರ್. ಸಿಂಚನಾ ಪೀಠಕ್ಕೆ ತಿಳಿಸಿದರು. ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.