ADVERTISEMENT

ಎಂ.ಪಿ. ಪ್ರಕಾಶ್ ಶ್ರೇಷ್ಠ ರಾಜಕಾರಣಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 20:00 IST
Last Updated 14 ಫೆಬ್ರುವರಿ 2011, 20:00 IST
ಎಂ.ಪಿ. ಪ್ರಕಾಶ್  ಶ್ರೇಷ್ಠ ರಾಜಕಾರಣಿ
ಎಂ.ಪಿ. ಪ್ರಕಾಶ್ ಶ್ರೇಷ್ಠ ರಾಜಕಾರಣಿ   

ಬೆಂಗಳೂರು: ‘ಕೆಲವು ಪೂರಕ ಸಂದರ್ಭಗಳಲ್ಲಷ್ಟೇ ಜಾತಿ ಹಾಗೂ ಹಣ ಬಲದ ರಾಜಕಾರಣ ಗೆಲುವು ಸಾಧಿಸುತ್ತವೆ. ದೀರ್ಘಾವಧಿಯಲ್ಲಿ ಇವು ಯಶಸ್ವಿಯಾಗುವುದಿಲ್ಲ. ಈ ರೀತಿಯ ಕೆಟ್ಟ ಸಂದರ್ಭದಲ್ಲಿ ಎಂ.ಪಿ. ಪ್ರಕಾಶ್ ಸೋಲು ಕಂಡಿದ್ದು, ನಿಜಕ್ಕೂ ನೋವಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ವಿಷಾದಿಸಿದರು.

ಸದ್ಭಾವನಾ ಪ್ರತಿಷ್ಠಾನವು ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೂವಿನ ಹಡಗಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಕಾಶ್ ನೀಡಿದ ಕೊಡುಗೆ ಅಪಾರ. ಅದರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರು. ಇಷ್ಟಾದರೂ ಆ ಕ್ಷೇತ್ರದ ಜನತೆ ಪ್ರಕಾಶ್ ಅವರನ್ನು ಭಾರಿ ಮತಗಳ ಅಂತರದಿಂದ ಯಾಕೆ ಸೋಲಿಸಿದರು ಎಂಬುದು ಇಂದಿಗೂ ಅರ್ಥವಾಗಿಲ್ಲ’ ಎಂದರು.

‘ಪ್ರಕಾಶ್ ಒಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದರು. ಮರ್ಯಾದೆಗೆ ಅಂಜುತ್ತಿದ್ದ ಅವರು ಸ್ವಲ್ಪ ರಾಜಿ ಮಾಡಿಕೊಂಡಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ವಾಸ್ತವದಲ್ಲಿ ಅವರು ಮುಖ್ಯಮಂತ್ರಿಗಳಿಂತ ಉನ್ನತ ಮಟ್ಟದಲ್ಲಿದ್ದರು. ಹತ್ತಾರು ಮುಖ್ಯಮಂತ್ರಿಗಳನ್ನು ತಯಾರು ಮಾಡುವ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಹಾಗೂ ಮಾರ್ಗದರ್ಶನ ನೀಡುವಷ್ಟು ಜ್ಞಾನ ಅವರಿಗಿತ್ತು’ ಎಂದು ಹೇಳಿದರು.

‘ಮೇರು ವ್ಯಕ್ತಿತ್ವದ ಪ್ರಕಾಶ್ ಅವರ ಅಕಾಲಿಕ ಮರಣದಿಂದ ರಾಜ್ಯ ಬಡವಾಗಿದೆ. ನನ್ನ ಹಿರಿಯಣ್ಣನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ’ ಎಂದು ಹನಿಗಣ್ಣಾದರು.
‘ಈಜಿಪ್ಟ್‌ನ ಕೈರೋದಲ್ಲಿ ನಡೆದ ಬದಲಾವಣೆ ನಮ್ಮ ದೇಶದಲ್ಲೂ ಹಲವು ಮುಖಂಡರಿಗೆ ಭಯ ಮೂಡಿಸಿದೆ. ಅಲ್ಲಿ ನಡೆದ ಕ್ರಾಂತಿ ಇಲ್ಲಿ ನಡೆಯಲು ಹೆಚ್ಚು ಕಾಲ ಬೇಕಿಲ್ಲ. ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿದ್ದಾಗ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಕೇವಲ ಆರು ತಿಂಗಳಾದರೂ ಅಧಿಕಾರ ನೀಡಿದ್ದರೆ ಇಂದಿನ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ’ ಎಂದರು.

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ‘ಪ್ರಗತಿಪರ ಚಿಂತಕರಾಗಿದ್ದ ಪ್ರಕಾಶ್ ವರ್ಣ, ಲಿಂಗ ಅಸಮಾನತೆಯನ್ನು ಖಂಡಿಸುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅವರ ವಿನಯಪೂರ್ವಕ ಸಾತ್ವಿಕ ಮನೋಭಾವ ಅನುಕರಣೀಯ’ ಎಂದರು.

ಪತ್ರಕರ್ತ ರವೀಂದ್ರ ರೇಷ್ಮೆ, ‘ಪ್ರಕಾಶ್ ಅವರು ಬೇರು ಮಟ್ಟದ ವರ್ಚಸ್ಸನ್ನು ಉಳಿಸಿಕೊಂಡಿದ್ದರು. ಆದರೆ ರಾಕ್ಷಸ ಸ್ವರೂಪಿ ರಾಜಕಾರಣಕ್ಕೆ ಬಲಿಯಾದರು. ಆದರೆ ಜನತೆಗೆ ಸಾತ್ವಿಕ ರಾಜಕಾರಣದ ಬಗ್ಗೆ ತುಡಿತವಿದೆ ಎಂಬುದು ಪ್ರಕಾಶ್ ಅವರಿಗೆ ಸಂದ ನಮನಗಳಿಂದಲೇ ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.
ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.