ADVERTISEMENT

ಎಂಬೆಸಿ ಸಂಸ್ಥೆಯಿಂದ ಮಾದರಿ ಶಾಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST
ಎಂಬೆಸಿ ಸಂಸ್ಥೆಯಿಂದ ಮಾದರಿ ಶಾಲೆ
ಎಂಬೆಸಿ ಸಂಸ್ಥೆಯಿಂದ ಮಾದರಿ ಶಾಲೆ   

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕಿನ ತರಹುಣಿಸೆ ಗ್ರಾಮದಲ್ಲಿ ಎಂಬೆಸಿ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಿರುವ ಸ್ಟೋನ್ ಹಿಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಗುರುವಾರ ಉದ್ಘಾಟಿಸಲಾಯಿತು.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಎಂಬೆಸಿ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಶಾಲಾ ಕಟ್ಟಡವನ್ನು ನಿರ್ಮಿಸಿದೆ.

ನೂತನ ಕಟ್ಟಡವು ವಿಶಾಲವಾದ ಹತ್ತು ಕೊಠಡಿಗಳು, ನರ್ಸರಿ ತರಗತಿಗಳಿಗಾಗಿ ಎರಡು ಕೊಠಡಿಗಳು, ದೊಡ್ಡ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಭವ್ಯವಾದ ರಂಗಮಂಟಪ, ಭೋಜನಾಲಯವನ್ನು ಒಳಗೊಂಡಿದೆ.

ಕಟ್ಟಡದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಂಸ್ಥೆಯು ಶಾಲೆಗೆ ಮೂವರು ಹೆಚ್ಚುವರಿ ಶಿಕ್ಷಕರ ಸೇವೆಯನ್ನು ಒದಗಿಸಲಿದೆ.

ಎಂಬೆಸಿ ಸಂಸ್ಥೆಯ ಅಧ್ಯಕ್ಷ ಜಿತೇಂದ್ರ ವೀರ್‌ವಾಣಿ ಮಾತನಾಡಿ, `ಶಿಕ್ಷಣ ನೀಡಿದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಗ್ರಾಮದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಮೊದಲ ಮಾದರಿ ಶಾಲೆಯನ್ನು ನಿರ್ಮಿಸಿದ್ದೇವೆ. ಇದೇ ರೀತಿಯ ಇನ್ನೂ 30 ಶಾಲೆಗಳನ್ನು ನಿರ್ಮಿಸುವ ಯೋಜನೆ ಇದೆ~ ಎಂದರು.

ಉದ್ಘಾಟನೆ ನೆರವೇರಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, `ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸುವ ಮಾನಸಿಕ ವಿಶ್ವಾಸವನ್ನು ತುಂಬಲು ಶಿಕ್ಷಕರು ಪ್ರಯತ್ನ ಮಾಡಬೇಕು~ ಎಂದು ಕರೆ ನೀಡಿದರು.

`ಇಲ್ಲಿನ ಸರ್ಕಾರಿ ಶಾಲೆಯನ್ನು ವಿದೇಶದ ಶಾಲೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಂಬೆಸಿ ಸಂಸ್ಥೆಯವರ ಕಾರ್ಯ ಶ್ಲಾಘನೀಯ. ಈ ಕಾರ್ಯ ಇತರರಿಗೂ ಮಾದರಿಯಾಗಬೇಕು~ ಎಂದು ಆಶಿಸಿದರು.

ಸಂಸದ ಬಿ.ಬಿ.ಚಂದ್ರೇಗೌಡ, ಶಾಸಕ ಕೃಷ್ಣಬೈರೇಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ಡಿ, ಜಿ.ಪಂ. ಅಧ್ಯಕ್ಷ ಮರಿಯಪ್ಪ, ಸದಸ್ಯರಾದ ಕೆ.ಅಶೋಕನ್, ದಾನೇಗೌಡ, ತಾ.ಪಂ. ಸದಸ್ಯೆ ಅರುಣಾ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ವಲಯದ ಉಪ ನಿರ್ದೇಶಕ ಟಿ.ಸಿ.ಚಂದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಯರಂಗ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಂಜಿನಪ್ಪ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.