ADVERTISEMENT

ಎಜುಕೇಶನ್ ಯುಕೆ 2012 ಪ್ರದರ್ಶನ: ಮಾಹಿತಿ ಪಡೆದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 4:55 IST
Last Updated 7 ಫೆಬ್ರುವರಿ 2012, 4:55 IST

ಬೆಂಗಳೂರು: ಬ್ರಿಟಿಷ್ ಕೌನ್ಸಿಲ್ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ಎಜುಕೇಶನ್ ಯುಕೆ 2012~ ಪ್ರದರ್ಶನಕ್ಕೆ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದರು.

ಇಂಗ್ಲೆಂಡ್‌ನ 58 ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡಲು ಇರುವ ಅವಕಾಶಗಳ ಬಗ್ಗೆ ವಿ.ವಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹೊಸ ಕೋರ್ಸ್‌ಗಳು, ವ್ಯಾಸಂಗದ ಅವಧಿ, ಉದ್ಯೋಗ ಅವಕಾಶಗಳು ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು. ಕೋರ್ಸ್‌ಗಳ ಶುಲ್ಕ, ಇತರೆ ಖರ್ಚು ಸೇರಿದಂತೆ ವ್ಯಯಿಸಬೇಕಾದ ಹಣದ ಬಗ್ಗೆಯೂ ತಿಳಿದುಕೊಂಡರು.

ಭಾರತದಿಂದ ವಿದ್ಯಾರ್ಥಿಗಳು ಇಂಗ್ಲೆಂಡ್‌ಗೆ ಹೋಗಿ ವ್ಯಾಸಂಗ ಮಾಡಲು ವೀಸಾ ಬೇಕಾಗುತ್ತದೆ. ವಿದ್ಯಾರ್ಥಿ ವೀಸಾವನ್ನು ಪಡೆಯುವುದು ಹೇಗೆ ಯಾವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ವೀಸಾ ಅವಧಿ ಅಲ್ಲಿ ವ್ಯಾಸಂಗ ಪೂರೈಸಿದ ನಂತರ ಉದ್ಯೋಗ ವೀಸಾ ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
 
ವೀಸಾದ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಲಾಯಿತು. ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳಲ್ಲಿ ಯಾವುದು ಉತ್ತಮ ಎಂಬ ವಿಷಯದ ಬಗ್ಗೆ ಮಾತನಾಡಿದ ತಜ್ಞರು ತುಲನಾತ್ಮಕ ವಿಶ್ಲೇಷಣೆ ಮಾಡಿದರು. ಜೈವಿಕ ತಂತ್ರಜ್ಞಾನ, ಎಂಜಿನಿಯರಿಂಗ್ ಕೌಶಲ ವಿಷಯಗಳ ಕುರಿತ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

`ವೆಬ್‌ಸೈಟ್ ಮೂಲಕ ಎಜುಕೇಶನ್ ಯುಕೆ ಬಗ್ಗೆ ತಿಳಿದುಕೊಂಡೆ. ಆದ್ದರಿಂದ ಮಾಹಿತಿಗಾಗಿ ಈ ಪ್ರದರ್ಶನಕ್ಕೆ ಬಂದೆ. ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುವ ಇಚ್ಛೆ ಇದೆ. ಆದ್ದರಿಂದ ಆರು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜತೆ ಮಾತನಾಡಿ ವಿಷಯ ಸಂಗ್ರಹಿಸಿದೆ. ಹಲವು ಹೊಸ ವಿಷಯಗಳು ಗೊತ್ತಾದವು.
 
ಶುಲ್ಕದ ವಿವರವನ್ನೂ ನೀಡಿದರು. ಸಂಶೋಧನಾ ವಿಷಯ ಆಯ್ಕೆಯಾದ ನಂತರವೇ ಎಷ್ಟು ಶುಲ್ಕ ಭರಿಸಬೇಕಾಗುತ್ತದೆ ಎಂದು ಖಚಿತವಾಗುತ್ತದೆ ಎಂದು ಮಾಹಿತಿ~ ನೀಡಿದರು ಎಂದು ಬಯೊಟೆಕ್ ಸ್ನಾತಕೋತ್ತರ ಪದವೀಧರೆ ಮೈಸೂರಿನ ರಕ್ಷಾ ಹೇಳಿದರು. `ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಬಯಕೆ ಇರುವ ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ಉಪಯುಕ್ತವಾಗಿತ್ತು~ ಎಂದು ಅಭಿಪ್ರಾಯಪಟ್ಟರು.

ಐರ್ಲೆಂಡ್ ವಿ.ವಿ:ಒಂದೆಡೆ `ಎಜುಕೇಶನ್ ಯುಕೆ 2012~ ಪ್ರದರ್ಶನ ನಡೆಯುತ್ತಿದ್ದರೆ ಇನ್ನೊಂದೆಡೆ ಐರ್ಲೆಂಡ್‌ನ ಏಳು ವಿಶ್ವವಿದ್ಯಾಲಯಗಳ ಪ್ರದರ್ಶನ ನಗರದ ಹೋಟೆಲ್‌ವೊಂದರಲ್ಲಿ ನಡೆಯಿತು. ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿ ಅಗತ್ಯ ಮಾಹಿತಿ ಪಡೆದರು. `ದೇಶದ ವಿಶ್ವವಿದ್ಯಾಲಯಗಳಲ್ಲಿ ಚೀನಾ  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ~ ಎಂದು ಯುಸಿಡಿ ಬ್ಯುಸಿನೆಸ್ ಅಂಡ್ ಲಾ ಕಾಲೇಜಿನ ಪ್ರೊ. ಫ್ರಾಂಕ್ ರೊಕೆ `ಪ್ರಜಾವಾಣಿಗೆ ತಿಳಿಸಿದರು.

`ಔಷಧ ಉದ್ಯಮ ಸೇರಿದಂತೆ ಹಲವು ಉದ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಇಂಗ್ಲಿಷ್ ಭಾಷೆ ಚೆನ್ನಾಗಿ ಕಲಿತಿರುವ ಭಾರತೀಯ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗ ಅವಕಾಶಗಳಿವೆ~ ಎಂದರು.

ಡಬ್ಲಿನ್ ಸಿಟಿ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಐರ್ಲೆಂಡ್ ಸೇರಿದಂತೆ ಪ್ರಮುಖ ವಿ.ವಿ ಪ್ರತಿನಿಧಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.