ADVERTISEMENT

ಎ.ಜೆ.ಸದಾಶಿವ ಆಯೋಗ: ಜನಪ್ರತಿನಿಧಿಗಳಿಗೆ ಸಲಹೆ ನೀಡಲು ಸಮಯವಿಲ್ಲ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬೆಂಗಳೂರು: ಸರ್ಕಾರದ ಸವಲತ್ತುಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಸೂಕ್ತ ಸಲಹೆ ನೀಡಲು ರಾಜ್ಯದ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳಿಗೆ ಸಮಯವಿಲ್ಲ. ಆದರೆ ಸವಲತ್ತುಗಳು ಪರಿಶಿಷ್ಟ ಜನಾಂಗದವರಿಗೆ ದೊರೆಯುತ್ತಿಲ್ಲ ಎಂದು ದೂರಲು ಅವರು ಮರೆಯುವುದಿಲ್ಲ!

ಸರ್ಕಾರದ ವಿವಿಧ ಸೌಲಭ್ಯಗಳು ಪರಿಶಿಷ್ಟ ಜನಾಂಗಗಳಿಗೆ ಸೂಕ್ತವಾಗಿ ಲಭ್ಯವಾಗುವಂತೆ ಮಾಡುವುದು ಹೇಗೆ ಎಂಬ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ನೇಮಕವಾಗಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಎದುರು ಪರಿಶಿಷ್ಟ ಜನಾಂಗಕ್ಕೆ ಸೇರಿದ ರಾಜ್ಯದ 36 ಶಾಸಕರು ಮತ್ತು ಆರು ಸಂಸದರ ಪೈಕಿ ಕೇವಲ ಮೂವರು ಶಾಸಕರು ಹಾಜರಾಗಿ ಸಲಹೆ ನೀಡಿದ್ದಾರೆ.

ಆಯೋಗವು ಡಿಸೆಂಬರ್ 8ರಂದು ನಡೆಸಿದ ಸಭೆಗೆ ಪಕ್ಷೇತರ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಬಿಜೆಪಿಯ ವೈ. ಸಂಪಂಗಿ ಮತ್ತು ಜಿ.ಎನ್. ನಂಜುಂಡಸ್ವಾಮಿ ಅವರು ಮಾತ್ರ ಹಾಜರಾಗಿ ಸಲಹೆ, ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅನೇಕ ಜನಪ್ರತಿನಿಧಿಗಳು ಬೆಂಗಳೂರಿನಲ್ಲೇ ಇದ್ದರೂ, ಸಭೆಗೆ ಹಾಜರಾಗಿಲ್ಲ.

ಆಯೋಗವು ರಾಜ್ಯದ 28 ಸಂಸದರಿಗೆ ಪತ್ರ ಬರೆದು ಅವರಿಂದ ಸಲಹೆ, ಸೂಚನೆಗಳನ್ನು ಕೇಳಿತ್ತು. ಆದರೆ ಪರಿಶಿಷ್ಟ ಜಾತಿಗೆ ಸೇರಿದ ಐವರು ಸಂಸದರೂ ಸೇರಿದಂತೆ ಯಾರೊಬ್ಬರೂ ಆಯೋಗದ ಪತ್ರಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಜನಪ್ರತಿನಿಧಿಗಳು ಮಾತ್ರವಲ್ಲ, ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಪ್ರಾಧ್ಯಾಪಕರೂ ಆಯೋಗದ ಪತ್ರಕ್ಕೆ ಉತ್ತರ ಬರೆದಿಲ್ಲ. ಪರಿಶಿಷ್ಟ ಜಾತಿಗಳಲ್ಲಿನ ಉಪ ಜಾತಿಗಳು, ಅದರಲ್ಲಿಯೂ ಮೀಸಲಾತಿ ಪ್ರಯೋಜನಗಳು ಲಭಿಸದ ಜಾತಿಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಸೂಚಿಸುವ ಉದ್ದೇಶದಿಂದ ಈ ಆಯೋಗವನ್ನು 2005ರಲ್ಲಿ ರಚಿಸಲಾಗಿತ್ತು.

ಆಯೋಗವು ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದೇ ಏಪ್ರಿಲ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.