ADVERTISEMENT

ಎಟಿಎಂಗಳಲ್ಲಿ ಹಣ ಖಾಲಿ: ಪರದಾಡಿದ ಜನತೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:35 IST
Last Updated 26 ಅಕ್ಟೋಬರ್ 2011, 19:35 IST

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಬೇಕೆಂದುಕೊಂಡಿದ್ದ ನೂರಾರು ಮಂದಿಗೆ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಮಂಗಳವಾರ ಹಣ ಖಾಲಿಯಾಗಿದ್ದರಿಂದ ತೊಂದರೆ ಅನುಭವಿಸುವಂತಾಯಿತು.

ಪ್ರಮುಖ ವಾಣಿಜ್ಯ ಪ್ರದೇಶ ಹಾಗೂ ವೃತ್ತಗಳಲ್ಲಿನ ಎಟಿಎಂ ಕೇಂದ್ರಗಳಲ್ಲಿ ಹಣ ಖಾಲಿಯಾಗಿದ್ದರಿಂದ ಹಬ್ಬದ ಖರೀದಿಗೆ ಬಂದವರು ನಿರಾಶರಾಗಿ ಸಮೀಪದ ಬೇರೆ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳತ್ತ ಮುಖ ಮಾಡಬೇಕಾಯಿತು.

ದೀಪಾವಳಿ ಪ್ರಯುಕ್ತ ಸಣ್ಣ ಪುಟ್ಟ ವಸ್ತುಗಳ ಖರೀದಿಗೆ ಹಣ ಪಡೆಯಲು ಗ್ರಾಹಕರು ಸಹಜವಾಗಿ ಎಟಿಎಂಗಳತ್ತು ಮುಗಿ ಬಿದ್ದರು. ಆದರೆ ಗ್ರಾಹಕರಿಗೆ ನಿರಾಶೆ ಕಾದಿತ್ತು. ಕೆಲ ಎಟಿಎಂ ಕೇಂದ್ರಗಳಲ್ಲಿ ಹಣ ಬೇಗ ಖಾಲಿಯಾಗಿದ್ದರಿಂದ ಗ್ರಾಹಕರು ಹತ್ತಿರದ ಎಟಿಎಂ ಕೇಂದ್ರಗಳಿಗಾಗಿ ಹುಡುಕಾಟ ನಡೆಸಬೇಕಾಯಿತು.

`ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ 100 ರೂಪಾಯಿ ನೋಟುಗಳ ಬದಲಿಗೆ ಕೇವಲ 500 ರೂಪಾಯಿ `ಡ್ರಾ~ ಮಾಡಲು ಸಾಧ್ಯವಾಗುತ್ತಿತ್ತು. ಇದರಿಂದ 500ಕ್ಕಿಂತ ಕಡಿಮೆ ಮೊತ್ತ ಹಣ ಡ್ರಾ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಬೇಕಾಯಿತು~ ಎಂದು ಗ್ರಾಹಕರು ದೂರಿದ್ದಾರೆ. ಬುಧವಾರ ಬೆಳಿಗ್ಗೆ 11- 11.30ರ ಸಮಯದ ನಂತರ ಈ ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರಿಗೆ ಹಣ ಲಭ್ಯವಾಯಿತು.

`ಸಾಮಾನ್ಯವಾಗಿ ಹಬ್ಬ-ಹರಿ ದಿನಗಳಲ್ಲಿ ಕೆಲವು ಎಟಿಎಂ ಕೇಂದ್ರಗಳಲ್ಲಿ ಜನ ಹೆಚ್ಚು ಹಣ `ಡ್ರಾ~ ಮಾಡುವುದರಿಂದ ಖಾಲಿಯಾಗಿ ತೊಂದರೆಯಾಗಿರಬಹುದು. ಆದರೆ, ಎಲ್ಲ ಎಟಿಎಂ ಕೇಂದ್ರಗಳಲ್ಲಿ ಇಂತಹ ತೊಂದರೆ ಎದುರಾಗಲು ಸಾಧ್ಯವಿಲ್ಲ. ಎಂದಿನಂತೆ ಎಟಿಎಂ ಕೇಂದ್ರಗಳ ಸಾಮರ್ಥ್ಯದಷ್ಟು ನಾವು ಹಣ ತುಂಬುತ್ತೇವೆ. ಹಬ್ಬದ ದಿನವಾಗಿದ್ದರಿಂದ ಜನ ಹೆಚ್ಚು ಹಣ ಡ್ರಾ ಮಾಡಿದಂತಹ ಎಟಿಎಂಗಳಲ್ಲಿ ಇಂತಹ ಸಮಸ್ಯೆ ಎದುರಾಗಿದೆಯಷ್ಟೆ~ ಎಂದು ಎಸ್‌ಬಿಎಂನ ವ್ಯವಸ್ಥಾಪಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಪ್ರತಿ ದಿನ ನಿರ್ದಿಷ್ಟ ಮೊತ್ತವನ್ನು ಎಟಿಎಂ ಕೇಂದ್ರಗಳಿಗೆ ತುಂಬಲೇಬೇಕು. ಹಬ್ಬ ಹಾಗೂ ಸತತ ರಜೆ ಬರುವ ದಿನಗಳಲ್ಲಿ ಮಾತ್ರ ಇಂತಹ ಸಮಸ್ಯೆ ಎದುರಾಗಬಹುದು. ಇಲ್ಲದಿದ್ದರೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಪ್ರಧಾನ ಕಚೇರಿಯಿಂದ ನೋಟಿಸ್ ನೀಡಿ ಸ್ಪಷ್ಟನೆ ಕೇಳುವ ವ್ಯವಸ್ಥೆ ಇದೆ~ ಎಂದು ಅವರು ಸ್ಪಷ್ಟಪಡಿಸಿದರು.
`ಖಾಸಗಿ ಬ್ಯಾಂಕ್‌ಗಳು ಎಟಿಎಂ ಕೇಂದ್ರಗಳಲ್ಲಿ ಹಣ ಖಾಲಿಯಾದ ತಕ್ಷಣ ತುಂಬಲು ಕೆಲ ಖಾಸಗಿ ಕಂಪೆನಿಗಳಿಗೆ ಹೊರ ಗುತ್ತಿಗೆ ನೀಡಿವೆ. ಹೀಗಾಗಿ, ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಇಂತಹ ದೂರುಗಳು ಬರುವುದು ಕಡಿಮೆ~ ಎಂದು ವಿವರಣೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.