ADVERTISEMENT

ಎಟಿಎಂನಲ್ಲಿ ಕಳವು ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು: ಆವಲಹಳ್ಳಿ ಹಾಗೂ ಕೊತ್ತನೂರಿನ ಎಟಿಎಂ ಘಟಕಗಳಲ್ಲಿ ಇತ್ತೀಚೆಗೆ ಕಳವು ಮಾಡಲು ಯತ್ನಿಸಿದ್ದ  ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಬೈರರಾಜು (33) ಮತ್ತು ಬಾಬು (24) ಬಂಧಿತರು. ಆರೋಪಿಗಳು ನ.26 ಮತ್ತು ನ.29ರಂದು ಆವಲಹಳ್ಳಿಯ ಯೂಕೊ ಬ್ಯಾಂಕ್‌ ಹಾಗೂ ಕೆ.ನಾರಾಯಣಪುರ ಮುಖ್ಯರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಎಟಿಎಂ ಘಟಕಗಳಲ್ಲಿ ಕಳವು ಮಾಡಲು ಯತ್ನಿಸಿದ್ದರು.

ನಗರದ ಎನ್‌.ಆರ್‌.ಚೌಕದ ಕಾರ್ಪೊರೇಷನ್‌ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ನಂತರ ಭದ್ರತೆಯಿಲ್ಲದ ಎಟಿಎಂ ಘಟಕಗಳನ್ನು ನಗರ ಪೊಲೀಸರು ಮುಚ್ಚಿಸಿದ್ದರು. ಇದರ ಲಾಭ ಪಡೆದ ಆರೋಪಿಗಳು ಕಳವು ಮಾಡಲು ಯತ್ನಿಸಿದ್ದರು. ಆರೋಪಿ ಬೈರರಾಜು ಮುಖಕ್ಕೆ ಹೆಲ್ಮೆಟ್‌ ಹಾಕಿಕೊಂಡು ಎಟಿಎಂ ಘಟಕದೊಳಗೆ ಹೋಗುತ್ತಿದ್ದ. ಕ್ಯಾಬ್‌ ಚಾಲಕನಾಗಿರುವ ಬಾಬು, ಘಟಕದ ಹೊರಗೆ ವಾಹನ ನಿಲ್ಲಿಸಿಕೊಂಡು ಪೊಲೀಸರು ಬಂದರೆ ಸೂಚನೆ ಕೊಡುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ನಾಲ್ಕು ದಿನಗಳ ಅಂತರದಲ್ಲಿ ಎರಡು ಕಡೆ ಎಟಿಎಂ ಘಟಕಗಳಲ್ಲಿ ಕಳವು ಯತ್ನ ನಡೆದಿದ್ದರಿಂದ ಒಂದೇ ತಂಡದ ಸದಸ್ಯರು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಯಿತು. ಹೀಗಾಗಿ ಎರಡೂ ಘಟಕಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಒಂದೇ ತರಹದ ಹೆಲ್ಮೆಟ್‌ ಧರಿಸಿ ಎಟಿಎಂ ಘಟಕಗಳಿಗೆ ನುಗ್ಗಿದ್ದ ಆರೋಪಿ, ಎರಡೂ ಘಟಕಗಳಲ್ಲೂ ಸ್ಕ್ರೂಡ್ರೈವರ್‌ನಿಂದಲೇ ಎಟಿಎಂ ಯಂತ್ರವನ್ನು ಬಿಚ್ಚಲು ಯತ್ನಿಸಿದ್ದ. ಕೆ.ನಾರಾಯಣಪುರದ ಘಟಕಕ್ಕೆ ನುಗ್ಗಿದ್ದ ಬೈರರಾಜು, ಒಮ್ಮೆ ಹೆಲ್ಮೆಟ್‌ ತೆಗೆದು ಪುನಃ ಹಾಕಿಕೊಂಡಿದ್ದ. ಆ ದೃಶ್ಯ ಘಟಕದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.  ಆ ದೃಶ್ಯವನ್ನು ಪಡೆದು ತನಿಖೆ ಆರಂಭಿಸಲಾಯಿತು’ ಎಂದು  ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಎಟಿಎಂ ಘಟಕಗಳಲ್ಲಿ ಕಳವು ಮಾಡಿದ್ದ ಆರೋಪಿಗಳ ಪಟ್ಟಿಯನ್ನು ನಗರದ ಎಲ್ಲ ಠಾಣೆಗಳಿಂದ ತರಿಸಿಕೊಂಡು ಪರಿಶೀಲನೆ ನಡೆಸಲಾ­ಯಿತು. ಆಗ  ಬೈರರಾಜು ಈ ಕೃತ್ಯ ಎಸಗಿರುವುದು ಗೊತ್ತಾಯಿತು. ನಂತರ ಆತನ ಕುಟುಂಬ ಸದಸ್ಯರ ನೆರವಿನಿಂದ ಬಾಣಸವಾಡಿಯಲ್ಲಿ ಬಂಧಿಸಲಾಯಿತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಬಾಬುವನ್ನು ಬಂಧಿಸಲಾ­ಯಿತು’ ಎಂದು ಮಾಹಿತಿ ನೀಡಿದರು.

ಪಿಯುಸಿ ಓದಿದ್ದ ಬೈರರಾಜು ಹೋಟೆಲ್‌­ನಲ್ಲಿ ಕೆಲಸ ಮಾಡಿಕೊಂಡಿದ್ದ. 2003ರಲ್ಲಿ ಕಲಾಸಿಪಾಳ್ಯದ ಕೊಲೆ ಪ್ರಕರಣದಲ್ಲಿ ಆತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. 6 ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಗೆ ಹೈಕೋರ್ಟ್‌ ಜಾಮೀನು ನೀಡಿತ್ತು. ಬಳಿಕ ಕಮರ್ಷಿಯಲ್ ಸ್ಟ್ರೀಟ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಮೂರು ಬಾರಿ ಕನ್ನ ಕಳವು ಮಾಡಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

2009ರಲ್ಲಿ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಮೋರಿಯಿಂದ ಸುರಂಗ ಕೊರೆದು ಆಭರಣ ಮಳಿಗೆಯಲ್ಲಿ ಕಳವು ಮಾಡಲು ಯತ್ನಿಸಿದ್ದ. 2011ರಲ್ಲಿ ಮಹದೇವಪುರದ ಆಭರಣದ ಮಳಿಗೆಗೆ ಕನ್ನಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಎಂಬುದು ಆತನ ವಿಚಾರಣೆಯಿಂದ ಗೊತ್ತಾಗಿದೆ ಎಂದು ಕೊತ್ತನೂರು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.