ಯಲಹಂಕ: ಎಟಿಎಂ ಘಟಕಕ್ಕೆ ನುಗ್ಗಿದ ದುಷ್ಕರ್ಮಿಗಳು ರೂ 24 ಲಕ್ಷ ಹಣದ ಜತೆ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ಬಾಗಲೂರು ಬಳಿಯ ದ್ವಾರಕನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ದ್ವಾರಕನಗರದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಎಸ್‌ಬಿಐ ತನ್ನ ಹೊಸ ಶಾಖೆ ತೆರೆದಿತ್ತು. ಆ ಶಾಖೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ಎಟಿಎಂ ಘಟಕವಿದೆ. ರಾತ್ರಿ 1.24ರ ಸುಮಾರಿಗೆ ಜೀಪಿನಲ್ಲಿ ಆ ಘಟಕದ ಬಳಿ ಬಂದಿರುವ ಏಳು ಮಂದಿ ದುಷ್ಕರ್ಮಿಗಳು, ಘಟಕದೊಳಗೆ ನುಗ್ಗಿ ಅಲ್ಲಿನ ಸಿ.ಸಿ ಕ್ಯಾಮೆರಾವನ್ನು ಮೊದಲು ಜಖಂಗೊಳಿಸಿದ್ದಾರೆ. ನಂತರ ಹಣವಿದ್ದ ಯಂತ್ರವನ್ನು ಘಟಕದಿಂದ ಹೊರಗೆ ತೆಗೆದುಕೊಂಡು ಹೋಗಿ ಜೀಪಿನಲ್ಲಿ ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಡಿಗೇಡಿಗಳು ಕೇವಲ ಎಂಟು ನಿಮಿಷದಲ್ಲಿ ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್‌ನ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಕಚೇರಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಕಟ್ಟಡದ ಹೊರ ಭಾಗದಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳ ಚಲನವಲನದ ದೃಶ್ಯದಾಖಲಾಗಿದೆ. ಆದರೆ, ಅವರು ಮುಸುಕುಧಾರಿಗಳಾಗಿ ಬ್ಯಾಂಕ್‌ನ ಬಳಿ ಬಂದಿರುವುದರಿಂದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಬ್ಯಾಂಕ್‌ನ ವ್ಯವಸ್ಥಾಪಕ ಗುರುರಾಜ್ ಅವರು ದೂರು ಕೊಟ್ಟಿದ್ದಾರೆ. ಬ್ಯಾಂಕ್‌ನ ಅಧಿಕಾರಿಗಳು ಎಟಿಎಂ ಘಟಕಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ. ಅಲ್ಲದೇ, ಘಟಕದಲ್ಲಿ ಎಟಿಎಂ ಯಂತ್ರವನ್ನು ಸರಿಯಾಗಿ ಜೋಡಣೆ ಮಾಡದೆ ಪೆಟ್ಟಿಗೆ ರೀತಿಯಲ್ಲಿ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, `ನಗರದ ವಿವಿಧೆಡೆ ಎಟಿಎಂ ಘಟಕಗಳಲ್ಲಿ ನಡೆದಿರುವ ಕಳವು ಪ್ರಕರಣಗಳನ್ನು ಈಗಾಗಲೇ ಭೇದಿಸಲಾಗಿದೆ. ಅದೇ ರೀತಿ ಈ ಪ್ರಕರಣವನ್ನು ಶೀಘ್ರವೇ ಭೇದಿಸಿ ಆರೋಪಿಗಳನ್ನು ಬಂಧಿಸುತ್ತೇವೆ' ಎಂದು ಹೇಳಿದರು. ಬಾಗಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.